ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಪ.ಪೂ.ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಚಾಲನೆ ನೀಡಿದರು. ಡಿಡಿಪಿಯು ಜಿ.ಎಚ್.ಜಗದೀಶ್, ದೈಹಿಕ ಪರಿವೀಕ್ಷಕ ಕೆ.ರಂಗಸ್ವಾಮಿನಾಯಕ ಇತರರಿದ್ದರು. 
ಜಿಲ್ಲೆ

ನಿರಂತರ ಪ್ರಯತ್ನದಿಂದ ಗೆಲುವಿಗೆ ದಾರಿ

ಗಂಗಾವತಿ: ಕ್ರೀಡಾ ಸ್ಫೂರ್ತಿಯಿಂದ ಆಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಎಂದು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿದರು.

ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ

ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ವಿದ್ಯಾನಿಕೇತನ ಪಿಯು ಕಾಲೇಜು ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೋಲು-ಗೆಲುವು ಆಟದಲ್ಲಿ ಸಾಮಾನ್ಯವಾಗಿದೆ. ಆದರೆ ಸೋಲಿಗೆ ಎದೆಗುಂದಬಾರದು. ನಿರಂತರ ಪ್ರಯತ್ನದ ಮೂಲಕ ಗುರಿಸಾಧಿಸಿದಾಗ ಗೆಲುವಿಗೆ ದಾರಿಯಾಗಲಿದೆ. ಜಿಲ್ಲೆಯಲ್ಲಿ ಕ್ರೀಡಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಜಿ.ಅನಿಲ್ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳು ಸಾಕಷ್ಟಿವೆ. ಆದರೆ ಪೂರಕವಾದ ವಾತಾವರಣವಿಲ್ಲ. ಇಲಾಖೆಯೊಂದಿಗೆ ಶಿಕ್ಷಣ ಸಂಸ್ಥೆಗಳು ನೆರವಾಗುವ ಮೂಲಕ ಸ್ಥಳೀಯ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸಬೇಕಿದೆ ಎಂದರು.

ಡಿಡಿಪಿಯು ಜಿ.ಎಚ್.ಜಗದೀಶ್, ವಿದ್ಯಾನಿಕೇತನ ಪಿಯು ಕಾಲೇಜಿನ ಪ್ರಾಚಾರ್ಯ ಉಮಾಶಂಕರ, ನಿರ್ದೇಶಕರಾದ ಮಲ್ಲಿಕಾರ್ಜುನ, ಜಗನ್, ತಾಲೂಕು ದೈಹಿಕ ಪರಿವೀಕ್ಷಕ ಕೆ.ರಂಗಸ್ವಾಮಿ ನಾಯಕ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಟಿ.ಸಿ.ಶಾಂತಪ್ಪ, ಬಸಪ್ಪ ನಾಗೋಲಿ, ರಾಜಶೇಖರ್ ಪಾಟೀಲ್, ದೈಹಿಕ ಶಿಕ್ಷಕರಾದ ಚಂದ್ರಶೇಖರ್ ಜಾಪಾಳ್, ಶಿವಕಾಂತ, ಉಪನ್ಯಾಸಕರಾದ ಮಹೆಬೂಬ್‌ಅಲಿ, ಸೋಮಶೇಖರ್ ಇತರರಿದ್ದರು.
ಎರಡು ದಿನಗಳ ವೈಯಕ್ತಿಕ ಮತ್ತು ಗುಂಪು ಆಟಗಳಲ್ಲಿ ಜಿಲ್ಲೆಯ 7 ತಾಲೂಕಿನ ಸಾವಿರಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದ್ದರು.