ತಣ್ಣೀರುಬಾವಿ ಬೀಚ್‌ನಲ್ಲಿ 3 ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಸರ್ಫಿಂಗ್‌ಗೆ ಶುಕ್ರವಾರ ಚಾಲನೆ ದೊರೆತಿದೆ. ವಿವಿಧ ರಾಜ್ಯದ ಸ್ಪರ್ಧಾಳುಗಳು ಪಾಲ್ಗೊಂಡರು. 
ಜಿಲ್ಲೆ

ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ

Chethan padubidri

ಪ್ರಮುಖ ಮುಖ್ಯಾಂಶಗಳು

  • ತಣ್ಣೀರುಬಾವಿಯ ಬ್ಲೂ ಬೇ ಎಕೋ ಬೀಚ್‌ನಲ್ಲಿ ಚಾಲನೆ
  • 20ನೇ ಏಷ್ಯನ್ ಗೇಮ್ಸ್-ಸರ್ಫಿಂಗ್‌ ಪ್ರವೇಶಕ್ಕಾಗಿ ಸರ್ಫಿಂಗ್ ಚಾಂಪಿಯನ್‌ಶಿಪ್
  • ಸರ್ಫಿಂಗ್ ಕ್ರೀಡೆಗೆ ಮಂಗಳೂರು ಬೀಚ್ ಪ್ರಸಕ್ತ: ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.
ಮಂಗಳೂರು: ಜಪಾನ್‌ನ ಐಚಿ ನಗೋಯಾದಲ್ಲಿ ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್-2026ರ ಸರ್ಫಿಂಗ್‌ನಲ್ಲಿ ಭಾರತದ ಸ್ಪರ್ಧಿಗಳ ಚೊಚ್ಚಲ ಪ್ರವೇಶಕ್ಕಾಗಿ ತಣ್ಣೀರುಬಾವಿಯ ಬ್ಲೂ ಬೇ ಎಕೋ ಬೀಚ್‌ನಲ್ಲಿ 'ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಶಿಪ್'ಗೆ ಚಾಲನೆ ನೀಡಲಾಯಿತು.
ಮೇ 31ರ ವರೆಗೆ ನಡೆಯುವ ಈ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸರ್ಫಿಂಗ್ ಕ್ರೀಡೆಗೆ ಮಂಗಳೂರು ಬೀಚ್ ಪ್ರಸಕ್ತವಾಗಿದೆ. ಮಂಗಳೂರಿನಲ್ಲಿ ಇಂತಹದೊಂದು ಸ್ಪರ್ಧೆ ಆಯೋಜನೆಯಾಗಿರುವುದರಿಂದ ಈ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸ್ಪರ್ಧೆಯಲ್ಲಿ ಕರ್ನಾಟಕ, ಕೇರಳ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಸರ್ಫಿಂಗ್ ಚಾಂಪಿಯನ್‌ಗಳು ಭಾಗವಹಿಸುತ್ತಿದ್ದಾರೆ. ದೇಶದಲ್ಲಿ ಸರ್ಫಿಂಗ್ ಹಾಗೂ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಕ್ರೀಡೆಗಳ ಆಡಳಿತ ಸಂಸ್ಥೆಯಾದ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯುವ ಈ ಸ್ಪರ್ಧೆಯನ್ನು ನವ ಮಂಗಳೂರು ಬಂದರು ಪ್ರಾಧಿಕಾರ ಸತತ ಮೂರನೇ ವರ್ಷವೂ 'ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್' ಶೀರ್ಷಿಕೆ ಪ್ರಾಯೋಜಕರಾಗಿ ಬೆಂಬಲಿಸುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಹ ಕಾರ್ಯಕ್ರಮಕ್ಕೆ ಕೈಜೋಡಿಸಿವೆ.
ಅಂಡರ್-14, ಅಂಡರ್ 18 ಮತ್ತು ಮುಕ್ತ ವಿಭಾಗದಲ್ಲಿ ಕ್ರೀಡೆ ನಡೆಯಲಿದೆ. ರಾಷ್ಟ್ರದ ಪುರುಷ ಮತ್ತು ಮಹಿಳಾ ಸ್ಪರ್ಧಾಳುಗಳು ಮುಖ್ಯವಾಗಿ ಸ್ಥಳೀಯ ಪ್ರತಿಭೆಗಳು ಪಾಲ್ಗೊಂಡರು.