ಬೆಂಗಳೂರು: ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಕುಂಚದಲ್ಲಿ ಮೂಡಿಬಂದಿರುವ ಸಪ್ತಸ್ವರಗಳ ವರ್ಣಚಿತ್ರ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಮಾ.5ರಂದು ಆಯೋಜಿಸಲಾಗಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಜೀವನ ಮತ್ತು ಪ್ರಕೃತಿ ಯೊಂದಿಗೆ ಪರಸ್ಪರ ಸಂಪರ್ಕದ ಪರಿಕಲ್ಪನೆ, ಸ್ವರ ರಾಗ ಚಿತ್ರ-ಹಾಡುವ ಭಾವಚಿತ್ರಗಳು ವಿಶಿಷ್ಟ ವಾದ ವರ್ಣಚಿತ್ರಗಳ ಗುಂಪಾ ಗಿದ್ದು, ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತದ ಪರಿಕಲ್ಪನೆಯಲ್ಲಿ ವರ್ಣಚಿತ್ರಗಳು ಮೂಡಿಬಂದಿವೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಕಲಾವಿದ ಡಾ. ಬಿ.ಕೆ.ಎಸ್. ವರ್ವ, ಭಾರತೀಯ ವಿದ್ಯಾಭವನದ ಮುಖ್ಯಸ್ಥ ಎನ್. ರಾಮನುಜ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸೊಗಸಾದ ವರ್ಣಚಿತ್ರ: ವರ್ಣಚಿತ್ರದಲ್ಲಿರುವ ಖಗೋಳವಿಜ್ಞಾನ, ಜ್ಯೋತಿಷ, ಸಂಗೀತ, ಸಂಸ್ಕೃತ ಮತ್ತು ಪ್ರಾಚೀನ ಭಾರತೀಯ ಕೃತಿಗಳಿಗೆ ಸಂಬಂಧಿಸಿದ ಅಂಶಗಳು ಕಣ್ಮನಸೂರೆಗೊಳ್ಳುವಂತೆ ಮಾಡುತ್ತದೆ. ವಿಶ್ವವಿಜ್ಞಾನದ ವರ್ಣಚಿತ್ರಗಳ ಸರಣಿಯಲ್ಲಿ ಐದನೆಯದಾಗಿದ್ದು, ಸೊಗಸಾದ ವರ್ಣಚಿತ್ರಗಳಿಗೆ ಸಂದಭೋಚಿತವಾಗಿ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಮಾಧುರ್ಯವಿದೆ. ಎರಡು ಶಾಸ್ತ್ರೀಯ ಸಂಗೀತದ ನಡುವಿನ ಸಾಮ್ಯತೆಯನ್ನು ವೀಕ್ಷಕನಿಗೆ ಪರಿಚಯಿಸುತ್ತದೆ. ಅಲ್ಲದೆ, ಏಳು ರಾಶಿಗಳಿಗೆ ಸಂಬಂಧಿಸಿದ ಅಂಶಗಳನ್ನು ಈ ವರ್ಣಚಿತ್ರಗಳಲ್ಲಿ ಗುಪ್ತಗಾಮಿನಿಯಾಗಿವೆ. ಸುರೇಶ್ ಅವರು ಹಿಂದಿನ ಸರಣಿಯಲ್ಲಿ ನಕ್ಷತ್ರಗಳು (ನಕ್ಷತ್ರಗಳು), ರಾಶಿಗಳು (ರಾಶಿ ಚಿಹ್ನೆಗಳು), ಅಷ್ಟಾದಿಕ್ಪಾಲಕರು, ಭಾರತೀಯ ಗ್ರಂಥಗಳು, ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯದ ಅಂಶಕ್ಕೆ ಸಂಬಂಧಿಸಿದ ವರ್ಣಚಿತ್ರ ರಚಿಸಿದ್ದರು.
ಮಾ.15ರವರೆಗೆ ಪ್ರದರ್ಶನ: ಮಾ.6ರಿಂದ 15ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರವರೆಗೆ ಪ್ರದರ್ಶನಕ್ಕೆ ಸಾರ್ವಜನಿಕರು ಭೇಟಿ ನೀಡಬಹುದು.