ಹಟ್ಟಿಚಿನ್ನದಗಣಿ: ಹಾವು ಎಂದರೆ ಹೆದರದವರಿಲ್ಲ. ಆದರೆ, ಕೆಲವರಿಗೆ ಹಾವು ಎಂದರೆ ಅಚ್ಚುಮೆಚ್ಚು. ಇಂಥವರ ಪೈಕಿ ಹಟ್ಟಿಯ ಸುರೇಶ್ ಕೆಜಿಎಫ್ ಕೂಡ ಒಬ್ಬರಾಗಿದ್ದಾರೆ. ಎಂತಹದೇ ಭಯಾನಕ ಹಾವು ಇದ್ದರೂ, ಅದನ್ನು ಸುಲಭವಾಗಿ ಹಿಡಿಯುತ್ತಾರೆ ಸುರೇಶ್ ಕೆಜಿಎಫ್.
ಸುರೇಶ್ ಚಿಕ್ಕವರಿರುವಾಗಿನಿಂದ ಹಾವು ಹಿಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಹಾವು ಹಿಡಿಯುವ ಕಲೆಗೆ ಇದೀಗ 20 ವರ್ಷಗಳು ಸಂದಿವೆ. ಒಂದು ಅಡಿಯಿಂದ 13 ಅಡಿ ಉದ್ದದ ಹಾವುಗಳನ್ನು ಹಿಡಿದಿದ್ದಾರೆ. ಹಾವು ಹಿಡಿಯುವುದು ಕೂಡ ಒಂದು ಕೌಶಲವಾಗಿದೆ. ಕೋಲಿನಿಂದ ಹಾವಿನ ಮುಖದ ಹಿಂದೆ ಹಿಡಿದರೆ ಅದಕ್ಕೆ ತಿರುಗಲು ಬರುವುದಿಲ್ಲ. ಬಾಲದಿಂದ ಕೈಗೆ ಸುತ್ತಿಕೊಳ್ಳುತ್ತದೆ. ಆದರೆ, ಯಾವುದೇ ಕಾರಣಕ್ಕೂ ಮುಖದ ಮೇಲಿನ ಕೋಲು ತೆಗೆಯಬಾರದು.
ಹಟ್ಟಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಎಲ್ಲೇ ಹಾವು ಕಂಡು ಬಂದರೂ ಜನರು ಸುರೇಶ್‌ಗೆ ಕರೆ ಮಾಡುತ್ತಾರೆ. ಹಾವು ಇರುವ ಸ್ಥಳಕ್ಕೆ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ದೌಡಾಯಿಸಿ ಅದನ್ನು ರಕ್ಷಿಸುತ್ತಾರೆ. ಹಾವುಗಳನ್ನು ಹಿಡಿಯುವ ಕೆಲವರು ಅದರೊಂದಿಗೆ ಆಟವಾಡಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅಪಾಯ ಹೆಚ್ಚು. ಹಾವುಗಳನ್ನು ರಕ್ಷಿಸಿ ಸೂಕ್ತ ಸ್ಥಳದಲ್ಲಿ ಬಿಡಬೇಕು.
ಇತರ ಪ್ರಾಣಿಗಳಿಗೆ ಹಾವುಗಳು ಹೆದರುತ್ತವೆ. ತೊಂದರೆಯಾದಾಗ ಮಾತ್ರ ಹಾವುಗಳು ಪ್ರತಿಕ್ರಿಯೆ ನೀಡುತ್ತವೆ. ಇಲ್ಲದಿದ್ದರೆ ಅದರ ಪಾಡಿಗೆ ಅದು ಇದ್ದು ಬಿಡುತ್ತದೆ ಎನ್ನುತ್ತಾರೆ ಸುರೇಶ್.