ನಾಗಮಂಗಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಮಾಜಿ ಶಾಸಕ ಸುರೇಶ್‌ಗೌಡ ಸೋಮವಾರ ಬೆಂಬಲ ಸೂಚಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ಕಳೆದ 8 ದಿನಗಳಿಂದ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳು ಕೇಳುತ್ತಿರುವ 23 ಬೇಡಿಕೆಗಳು ದೊಡ್ಡ ಬೇಡಿಕೆಗಳಲ್ಲ ಹಾಗೂ ಅಷ್ಟು ಕೂಡ ನ್ಯಾಯಸಮ್ಮತವಾಗಿವೆ. ಬೇಡಿಕೆಗಳನ್ನು ಕೂಡಲೇ ಈಡೇರಿಸಬಹುದಾಗಿದೆ. ಆದರೆ ಸರ್ಕಾರ ಯಾಕೆ ಮೀನಮೇಷ ಎಣಿಸುತ್ತಿದೆ ಎಂದು ಗೊತ್ತಿಲ್ಲ. ಇವರ ನ್ಯಾಯಸಮ್ಮತವಾದ ಹೋರಾಟದಿಂದ ಕಳೆದ ಒಂದು ವಾರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಸರ್ಕಾರ ಕಣ್ಣು ಮತ್ತು ಕಿವಿ ಮುಚ್ಚಿಕೊಂಡು ಏನು ತಿಳಿಯದಂತೆ ಕುಳಿತಿದೆ ಎಂದು ಆರೋಪಿಸಿದರು.
ಸರ್ಕಾರದ ಈ ನಡೆಯನ್ನು ಜನರು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಈ ಸರ್ಕಾರದ ಜನವಿರೋಧಿ ನಡೆಗೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಕೂಡಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವರು ಈ ವಿಚಾರವಾಗಿ ಅಂತಿಮ ತೀರ್ಮಾನ ಮಾಡಬೇಕಿದೆ. ಕಳೆದ 8 ದಿನಗಳ ಕಾಲ ಜನರಿಗೆ ಅನನುಕೂಲವಾದರೂ ಯಾವುದೇ ರೀತಿಯಲ್ಲೂ ಅವರ ಹೋರಾಟಕ್ಕೆ ಸ್ಪಂದಿಸದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜನಪರವಾದ ಆಡಳಿತ, ನಾನು ಜನಪರ, ಬಡವರ ಪರವಾದ ಸಿಎಂ ಎಂದು ಹೇಳುವ ಸಿದ್ದರಾಮಯ್ಯ ಅವರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ತಮ್ಮ ಮೂಲಸೌಲಭ್ಯಗಳಿಗಾಗಿ ಹೋರಾಟ ಮಾಡುತ್ತಿರುವ ನೌಕರರ ಮೇಲೆ ಅಧಿಕಾರದ ದಬ್ಬಾಳಿಕೆ ನಡೆಸುವ ಮೂಲಕ ಅವರನ್ನು ಅಮಾನತುಗೊಳಿಸುವ ಬೆದರಿಕೆ ಹಾಕುತ್ತಿರುವುದು ಹಾಗೂ ಅವರ ಹೋರಾಟವನ್ನು ದಮನ ಮಾಡಲು ಮುಂದಾಗುತ್ತಿರುವ ಸರ್ಕಾರದ ನಡೆ ನಿಜಕ್ಕೂ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಸಚಿವರು ಹೊಸ ಕಾರು ಖರೀದಿಸಲು ಸರ್ಕಾರದಲ್ಲಿ ಹಣವಿದೆ. ಆದರೆ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದನ್ನು ನೋಡಿದರೆ, ಇದು ಜನಪರ ಸರ್ಕಾರವಾಗಿರದೆ ಶೋಕಿ ಸರ್ಕಾರವಾಗಿದೆ. ಮೊದಲು ಸರ್ಕಾರ ತಮ್ಮ ರಾಜಕೀಯ ಗುದ್ದಾಟಗಳನ್ನು ಬದಿಗಿಟ್ಟು ಸಮಸ್ಯೆಯನ್ನು ಕೂಡಲೇ ಪರಿಹರಿಸಲಿ ಎಂದು ಒತ್ತಾಯಿಸಿದರು.
ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ತಮ್ಮಣ್ಣಗೌಡ, ಪುರಸಭೆ ಸದಸ್ಯ ಚನ್ನಪ್ಪ, ಮುಖಂಡರಾದ ಪುಟ್ಟಸ್ವಾಮಿಗೌಡ, ಅಶೋಕ್, ವಿನಯ್‌ಕುಮಾರ್, ಪ್ರವೀಣ್, ಪ್ರಶಾಂತ್‌ಬಾಬು ಇತರರು ಇದ್ದರು.
ರಾಜ್ಯಾದ್ಯಂತ ಪಕ್ಷದಿಂದ ಬೆಂಬಲ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಕ್ಷದ ಸಭೆ ಕರೆದಿದ್ದು, ರಾಜ್ಯಾದ್ಯಂತ ನಮ್ಮ ಪಕ್ಷದಿಂದ ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ಬೆಂಬಲ ಸೂಚಿಸುವ ವಿಚಾರವಾಗಿ ಚರ್ಚಿಸಲಾಗುವುದು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಅಧಿವೇಶನ ಮುಗಿದ ನಂತರ ಜಿಲ್ಲೆಗೆ ಆಗಮಿಸಿ ಜಿಲ್ಲಾ ಮಟ್ಟದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ನಮ್ಮ ಪಕ್ಷದಿಂದ ಇವರ ನ್ಯಾಯ ಸಮ್ಮತವಾದ ಹೋರಾಟಕ್ಕೆ ರಾಜ್ಯದ ಎಲ್ಲೆಡೆ ಬೆಂಬಲ ನೀಡಲಾಗುವುದು. ಬೇಡಿಕೆಗಳು ಈಡೇರಿಕೆ ಕುರಿತಾಗಿ ಲಿಖಿತವಾಗಿ ಸರ್ಕಾರದಿಂದ ಆದೇಶ ಬರುವವರೆಗೂ ಯಾವುದೇ ರೀತಿಯಲ್ಲಿ ಧೃತಿಗೆಡದೆ ನಿಮ್ಮ ಹೋರಾಟ ಮುಂದುವರಿಯಲಿ. ಅದಕ್ಕೆ ನಾವು ಜತೆಗಿರಲಿದ್ದೇವೆ ಎಂದು ಭರವಸೆ ನೀಡಿದರು.