ಮಂಗಳೂರು: ಹೊಸ ಚೈತನ್ಯ, ಹೊಸ ಹುರುಪು, ಹೊಸ ಕಲಿಕೆಯೊಂದಿಗೆ ಶಾಲಾ ಪ್ರಾರಂಭೋತ್ಸವ ಸುರತ್ಕಲ್ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿತು.
ಶಾಲೆಯ ಆಟದ ಮೈದಾನದಿಂದ ಬ್ಯಾಂಡ್ ವಾದ್ಯದೊಂದಿಗೆ ಸುರತ್ಕಲ್ ಸರ್ಕಲ್ ಮಾರ್ಗವಾಗಿ ಗೋವಿಂದದಾಸ ಕಾಲೇಜು ಆವರಣವಾಗಿ ವಿದ್ಯಾದಾಯಿನೀ ವಜ್ರ ಮಹೋತ್ಸವ ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಪುಷ್ಪದಳದೊಂದಿಗೆ ಸ್ವಾಗತಿಸಲಾಯಿತು.
2024-25ನೇ ಶೈಕ್ಷಣಿಕ ವರ್ಷವನ್ನು ಪರಿಣಾಮಕಾರಿಯಾದ ಮತ್ತು ರಚನಾತ್ಮಕವಾದ ಚಟುವಟಿಕೆಗಳನ್ನು ಸಂಘಟಿಸುವುದರ ಭರವಸೆಯೊಂದಿಗೆ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿಂದು ವಿದ್ಯಾದಾಯಿನೀ ಸಂಘದ ಹಿರಿಯ ಸದಸ್ಯರಾದ ಎಚ್.ಯು. ಅನಂತಯ್ಯ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಕಾರ್ಯದರ್ಶಿ ಎಚ್.ಶ್ರೀರಂಗ ವಹಿಸಿದ್ದರು. ಮಕ್ಕಳ ಕಲಿಕೆಯು ನಿರಂತರವಾಗಿ ನಡೆಯಬೇಕು, ಗುರು-ಶಿಷ್ಯರ ಸಂಬಂಧ ಅತ್ಯಮೂಲ್ಯವಾದದು ಮಕ್ಕಳು ಮೌಲ್ಯಯುತ ಶಿಕ್ಷಣವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ನೀಡಿದ ಉಚಿತ ಪಠ್ಯ ಪುಸ್ತಕಗಳನ್ನು ಮುಖ್ಯ ಅತಿಥಿಯಾದ ಶಿಕ್ಷಣ ಇಲಾಖೆಯ ಸುರತ್ಕಲ್ ಕ್ಲಸ್ಟರ್ ನ ಸಿ.ಆರ್.ಪಿ ರಾಮದಾಸ್ ವಿತರಿಸಿದರು. ಮುಖ್ಯ ಶಿಕ್ಷಕ ಬಾಲಚಂದ್ರ ಕೆ. ಸ್ವಾಗತಿಸಿದರು. ಶಾಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಪ್ರಸ್ತಾವನೆಗೈದರು.
ಹಿಂದು ವಿದ್ಯಾದಾಯಿನೀ ಸಂಘದ ಕೋಶಾಧಿಕಾರಿ ಎಚ್.ಎಲ್.ರಾವ್, ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ಸಂಘದ ಜೊತೆ ಕೋಶಾಧಿಕಾರಿ ರಮೇಶ್ ಟಿ.ಎನ್, ವಿದ್ಯಾದಾಯಿನೀ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಕುಳಾಯಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೇವದಾಸ್, ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಗಂಗಾಧರ ಪೂಜಾರಿ ಉಪಸ್ಥಿತರಿದ್ದು, ಮಕ್ಕಳಿಗೆ ಪ್ರೇರಣಾದಾಯಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ದಿವಸ್ಪತಿ ಕಾರ್ಯಕ್ರಮ ನಿರೂಪಿಸಿ, ರೇವತಿ ಬಿ. ವಂದಿಸಿದರು.