ಮಂಗಳೂರು: ಹೊಸ ತಂತ್ರಜ್ಞಾನಗಳ ಮೂಲಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮೇಕ್ ಫಾರ್ ವರ್ಲ್ಡ್ ಪರಿಕಲ್ಪನೆ ಜಾರಿಗೊಳಿಸಿದರೆ ವಿಶ್ವದ ಅಗ್ರಗಣ್ಯ ರಫ್ತು ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ದೇಶದ ರಕ್ಷಣಾ ಮಂತ್ರಿಯ ಮಾಜಿ ವೈಜ್ಞಾನಿಕ ಸಲಹೆಗಾರ, ರಕ್ಷಣಾ ಇಲಾಖೆ ಮಾಜಿ ಕಾರ್ಯದರ್ಶಿ ಮತ್ತು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧ್ಯಕ್ಷ ಡಾ.ಸತೀಶ್ ರೆಡ್ಡಿ ಹೇಳಿದರು.
ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ 21ನೇ ಘಟಿಕೋತ್ಸವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಯುವಕರು ಅತ್ಯಾಧುನಿಕ ಉತ್ಪನ್ನಗಳನ್ನು ಗುಣಮಟ್ಟದೊಂದಿಗೆ ಅಭಿವೃದ್ಧಿಪಡಿಸುವ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸಲು ಮುಂದೆ ಬರಬೇಕಿದೆ. ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ವಿಶ್ವಾದ್ಯಂತ ದೊರೆಯುವಂತಾಗಬೇಕು ಎಂದು ಕರೆ ನೀಡಿದರು.
2016ರ ಆಸುಪಾಸಿನಲ್ಲಿ ದೇಶದಲ್ಲಿ 458 ಸ್ಟಾರ್ಟ್ ಅಪ್‌ಗಳಿದ್ದವು. ಈಗ ಸ್ಟಾರ್ಟ್ ಅಪ್‌ಗಳ ಸಂಖ್ಯೆ 1 ಲಕ್ಷಕ್ಕೇರಿದೆ. ರಕ್ಷಣಾ ಕ್ಷೇತ್ರದಲ್ಲೇ 2 ಸಾವಿರದಷ್ಟು ಸ್ಟಾರ್ಟ್ ಅಪ್‌ಗಳಿವೆ. ಈ ಕಾರಣದಿಂದಲೇ ಹಿಂದೆ ಬೃಹತ್ ಆಮದು ದೇಶವಾಗಿದ್ದ ಭಾರತ ಈಗ ಪ್ರಮುಖ ರಫ್ತು ದೇಶವಾಗಿ ಬೆಳೆದಿದೆ ಎಂದು ಡಾ.ಸತೀಶ್ ರೆಡ್ಡಿ ಹೇಳಿದರು.
ಭಾರತವು ವಿಶ್ವದ ಇನ್ನೋವೇಶನ್ ಹಬ್ ಆಗಬೇಕಿದೆ. ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳ ಮೂಲಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯುವ ಜನಾಂಗ ಚಿಂತಿಸಬೇಕಿದ್ದು, ಇದು ದೇಶವನ್ನು ವಿಶ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ. ಕಳೆದ ವರ್ಷ ರಕ್ಷಣಾ ಸಚಿವಾಲಯವು 16 ಸಾವಿರ ಕೋಟಿ ರೂಪಾಯಿ ಮೌಲ್ಯದ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ರಫ್ತು ಮಾಡಿದೆ ಎಂದ ಹೇಳಿದ ಅವರು, ನಮ್ಮ ರಕ್ಷಣಾ ತಂತ್ರಜ್ಞಾನದ ಮೇಲೆ ಜಗತ್ತಿನ ಇತರ ದೇಶಗಳು ಕೂಡ ವಿಶ್ವಾಸ ವ್ಯಕ್ತಪಡಿಸಿದೆ. ಇದೀಗ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಪಕರಣಗಳ ತಯಾರಿಕೆಯಲ್ಲಿ ಪಾಲುದಾರರಾಗಲು ಅವಕಾಶಗಳನ್ನು ಒದಗಿಸಿದೆ, ಇದನ್ನೂ ಯುವ ಜನಾಂಗ ಸದುಪಯೋಗ ಮಾಡಬೇಕು ಎಂದು ಕರೆ ನೀಡಿದರು.
ಹಿಂದೆ ರಕ್ಷಣಾ ಉಪಕರಣಗಳನ್ನು ಹೊರದೇಶದಿಂದ ಆಮದು ಮಾಡಲಾಗುತ್ತಿತ್ತು. ಈಗ ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ್ದು, ತನ್ನ ಶಸ್ತ್ರಾಗಾರದಲ್ಲಿ ವ್ಯಾಪಕ ಶ್ರೇಣಿಯ ಕ್ಷಿಪಣಿಗಳನ್ನು ಹೊಂದಿದೆ. ಜತೆಗೆ ರಾಡಾರ್‌ಗಳು, ವಿಮಾನಗಳು, ಬಂದೂಕುಗಳು, ಸಂವಹನ ವ್ಯವಸ್ಥೆ, ಜಲಾಂತರ್ಗಾಮಿ ನೌಕೆಗಳ ತಯಾರಿಯಲ್ಲೂ ಸ್ವಾವಲಂಬಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೆಂಟಿಲೇಟರ್‌ಗಳು ಇಲ್ಲದಾಗ ಅತ್ಯಂತ ಕಡಿಮೆ ಅವಧಿಯಲ್ಲಿ 30 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸಿದಾಗ ದೇಶದ ಸಾಮರ್ಥ್ಯ ಸಾಬೀತಾಗಿದೆ. ಇದರಿಂದ ಅದೆಷ್ಟೋ ಕೈಗಾರಿಕೆಗಳು ತೆರೆದವು. ದೇಶದ ಈ ಸಾಮರ್ಥ್ಯವನ್ನು ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಅವರು ಹೇಳಿದರು.
2013 ವಿದ್ಯಾರ್ಥಿಗಳಿಗೆ ಪದವಿ
ಘಟಿಕೋತ್ಸವದಲ್ಲಿ ಒಟ್ಟು 2013 ವಿದ್ಯಾರ್ಥಿಗಳು ಪದವಿ ಪಡೆದರು. ಅವರಲ್ಲಿ 138 ಪಿಎಚ್‌ಡಿ, 961 ಪಿಜಿ ಮತ್ತು 914 ಬಿಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. ಒಂಬತ್ತು ಬಿಟೆಕ್ ವಿದ್ಯಾರ್ಥಿಗಳು ಮತ್ತು 30 ಪಿಜಿ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು.
ಎಲೆಕ್ಟ್ರಿಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನ ಸಿದ್ಧಾರ್ಥ್ ಆರ್. ಅಯ್ಯರ್ ಬಿಟೆಕ್‌ನಲ್ಲಿ 10 ಸಿಜಿಪಿಎ ಪಡೆದುಕೊಂಡಿದ್ದಾರೆ. 0-10 ಪಾಯಿಂಟ್ ಸ್ಕೇಲ್‌ನಲ್ಲಿ 10 ಸಿಜಿಪಿಎ ಪಡೆದ ಮೊದಲ ಬಿಟೆಕ್ ವಿದ್ಯಾರ್ಥಿ ಇವರು. ಆದರೆ ಕಾರಣಾಂತರಗಳಿಂದ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು.