Vector illustration in HD very easy to make edits. 
ಜಿಲ್ಲೆ

ಕೋಡಿಕೆರೆ ಗ್ಯಾಂಗ್‌ನಿಂದ ರೌಡಿಶೀಟರ್ ಕೊಲೆ ಯತ್ನ

ಹರೀಶ ಎಂ.

ಮಂಗಳೂರು: ಸುರತ್ಕಲ್ ಬಳಿಯ ಕುಳಾಯಿ ಬಾರ್ ಮುಂಭಾಗದಲ್ಲಿ ಬುಧವಾರ ರಾತ್ರಿ ರೌಡಿ ಶೀಟರ್ ಓರ್ವನ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ. ಮನೋಜ್ ಕೋಡಿಕೆರೆ ಗ್ಯಾಂಗ್‌ನವರು ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೀಡಾದ ಭರತ್ ಶೆಟ್ಟಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾನೆ.


ಕೋಡಿಕೆರೆ ನಿವಾಸಿ ಭರತ್ (32) ಹಲ್ಲೆಗೀಡಾದ ವ್ಯಕ್ತಿ. ಈತ ಸುರತ್ಕಲ್ ಮತ್ತು ಪಾಂಡೇಶ್ವರ ಠಾಣೆಯಲ್ಲಿ ಕೊಲೆ ಆರೋಪಿಯಾಗಿದ್ದು, ರೌಡಿ ಶೀಟರ್ ಆಗಿದ್ದಾನೆ. ಈ ಹಿಂದೆ ಕೋಡಿಕೆರೆ ಗ್ಯಾಂಗಿನಲ್ಲೇ ಇದ್ದ ಭರತ್ ಶೆಟ್ಟಿಗೆ ಗ್ಯಾಂಗ್ ಲೀಡರ್ ಮನೋಜ್ ಕೋಡಿಕೆರೆ ಜೊತೆ ವೈಮನಸ್ಸು ಉಂಟಾಗಿತ್ತು. ರಾತ್ರಿ ಕುಳಾಯಿ ಬಾರ್ ಹೊರಗಡೆ ಇದ್ದಾಗ, ಕಾರಿನಲ್ಲಿ ಬಂದಿದ್ದ ಕೋಡಿಕೆರೆ ಗ್ಯಾಂಗ್‌ನ ಚೇತು, ಗುಜ್ಜೆ ಶೈಲು, ರಾಜು ಫರಂಗಿಪೇಟೆ, ಕಿಶನ್ ಕೋಡಿಕೆರೆ ಎಂಬವರು ಭರತ್ ಶೆಟ್ಟಿ ಮೇಲೆ ತಲವಾರಿನಲ್ಲಿ ದಾಳಿ ನಡೆಸಿದ್ದಾರೆ.


ಸ್ನೇಹಿತ ಸುವಿನ್ ಜತೆ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಸುವಿನ್ ಬಿಯರ್ ತರಲೆಂದು ಬಾರ್ ಹೋಗಿದ್ದಾನೆ. ಈ ಸಂದರ್ಭ ಕಾಣಲು ಸಿಕ್ಕಿದ ಸುಜಿತ್ ಜತೆ ದ್ವಿಚಕ್ರ ವಾಹನದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಆರೋಪಿಗಳು ಏಕಾಏಕಿ ಕಾರಿನಲ್ಲಿ ಬಂದು ಕೊಲೆಗೆ ಯತ್ನಿಸಿದ್ದಾರೆ.


ಭರತ್ ಶೆಟ್ಟಿ ಕೈ ಬೆರಳು ಕಟ್ ಆಗಿದ್ದು, ಬಲ ಕಾಲು, ಕೆಳ ತುಟಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.