ಜಿಲ್ಲೆ

ಶಾಸ್ತ್ರೀಯ ಸಂಗೀತ ದೈವಿಕ ಕಲೆ ಸಂಗೀತ ತರಗತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು

ಹರೀಶ ಎಂ.

ಮಂಗಳೂರು: ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಪೋಷಕರು ಮಕ್ಕಳಿಗೆ ಎಳವೆಯಲ್ಲಿಯೇ ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಮೂಡಿಸಬೇಕು ಎಂದು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.


ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವತಿಯಿಂದ ಸುರತ್ಕಲ್‌ನ ಭಾಗ್ಯ ರೆಸಿಡೆನ್ಸಿಯಲ್ಲಿ ಆಯೋಜಿಸಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದೀಪ ಪ್ರಜ್ವಲನಗೊಳಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ ಮಾತನಾಡಿ, ವ್ಯಕ್ತಿಯ ಅಂತಃಸ್ಸತ್ವ ಅಭಿವ್ಯಕ್ತಿಸುವಲ್ಲಿ ಶಾಸ್ತ್ರೀಯ ಸಂಗೀತ ಕಲೆಯ ಅಭ್ಯಾಸ ವಿಶಿಷ್ಟವಾದುದು ಎಂದರು.


ಅಗರಿ ಸಮೂಹ ಸಂಸ್ಥೆಗಳ ಮಾಲೀಕ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸನಾತನ ಧರ್ಮದ ಶ್ರೇಷ್ಠತೆಯ ಅರಿವನ್ನು ಹಿರಿಯರು ಮಕ್ಕಳಿಗೆ ತಿಳಿಯಪಡಿಸಬೇಕೆಂದರು. ಹಿರಿಯ ನಾದಸ್ವರ ಕಲಾವಿದ ವಿದ್ವಾನ್ ನಾಗೇಶ ಎ.ಬಪ್ಪನಾಡು ಶುಭ ಹಾರೈಸಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ ಎಂದರು.


ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ.ರಾಜಮೋಹನ ರಾವ್, ಸಂಗೀತ ತರಗತಿಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾಡನಾಡಿದ ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಲೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಉತ್ತಮ ಕಲಾವಿದರಾಗಬಹುದು. ಸಂಗೀತ ಕಲಿಕೆಗೆ ಪೂರಕವಾಗಬಲ್ಲ ಯೋಗ, ಪ್ರಾಣಾಯಾಮ, ಧ್ಯಾನ, ಭಗವದ್ಗೀತೆ, ಭಜನೆ, ದೇವರನಾಮ, ಪುರಾಣ ಕಥೆಗಳನ್ನು ಕಲಿಸುವುದರೊಂದಿಗೆ ಸಂಸ್ಕಾರಯುತ ವ್ಯಕ್ತಿತ್ವ ಬೆಳೆಸುವ ಗುರಿಯಿರಿಸಿಕೊಳ್ಳಲಾಗಿದೆ ಎಂದರು.


ಭಾಗ್ಯ ಮಲ್ಲಿಕಾರ್ಜುನ, ಸುಜಾತ ಎಸ್. ಭಟ್, ಕೋಶಾಧಿಕಾರಿ ಆನಂದ ರಾವ್, ವಿಭು ರಾವ್ ಮತ್ತಿತರರು ಉಪಸ್ಥಿತರಿದ್ದರು. ಅರುಣಾ ರತೀಶ್ ಉಡುಪ ಕಾರ್ಯಕ್ರಮ ನಿರೂಪಿಸಿದರು. ಮಂಜುನಾದ ತಂಡದ ಕಲಾವಿದೆಯರಾದ ಆಶ್ವೀಜಾ ಉಡುಪ ಮತ್ತು ಸುಮೇಧ ಕೆ.ಎನ್. ಶ್ರೀ ಧರ್ಮಸ್ಥಳ ಕ್ಷೇತ್ರದ ಹಾಡುಗಳನ್ನು ಪ್ರಸ್ತುತ ಪಡಿಸಿದರು.