ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಆ.30ರಂದು ಕಾವೂರು ಜಂಕ್ಷನ್‌ನಿಂದ ವಾಮಂಜೂರು ಜಂಕ್ಷನ್‌ನವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9.30ಕ್ಕೆ ಕಾವೂರು ಜಂಕ್ಷನ್‌ನಲ್ಲಿ ನಡಿಗೆಗೆ ಚಾಲನೆ ಸಿಗಲಿದ್ದು, ಕೆಪಿಸಿಸಿ ಸದಸ್ಯರು, ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ಎರಡು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾವೂರಿನಿಂದ ಬೋಂದೆಲ್, ಪಚ್ಚನಾಡಿ ಮೂಲಕ ಸಾಗಿ ವಾಮಂಜೂರು ಜಂಕ್ಷನ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಸಮಾರೋಪಗೊಳ್ಳಲಿದೆ. ಸ್ವಾತಂತ್ರೃ ಸಂಗ್ರಾಮಕ್ಕಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ, ದೇಶಕ್ಕಾಗಿ ತನ್ನ ಪ್ರಾಣ ಬಲಿಕೊಟ್ಟ ಹುತಾತ್ಮರಿಗೆ ಗೌರವ ಸಲ್ಲಿಸಲು ಮತ್ತು ಇಂದಿನ ಪೀಳಿಗೆಗೆ ನೈಜ ಹೋರಾಟಗಾರರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಜಿಲ್ಲಾದ್ಯಂತ ಜಾಥಾ ನಡೆಸುತ್ತಿದ್ದು, ಆ. 30ಕ್ಕೆ ಕೊನೆಗೊಳ್ಳಲಿದೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟೋಲ್ ತೆರವಿಗೆ 15ದಿನ ಗಡು:
ಸಂಸದರು ಮತ್ತು ಶಾಸಕರು ಮನಸ್ಸು ಮಾಡಿದ್ದರೆ ಯಾವತ್ತೋ ಟೋಲ್‌ಗೇಟ್ ತೆರವುಗೊಳಿಸಬಹುದಿತ್ತು. ಟೋಲ್ ನಿರ್ಮಿಸುವ ಹಂತದಲ್ಲೇ ನಾನು ವಿರೋಧ ವ್ಯಕ್ತಪಡಿಸಿದ್ದೆ. ಅಂದು ಲೋಕೋಪಯೋಗಿ ಸಚಿವರಾಗಿದ್ದ ಮಹಾದೇವಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್ 9 ತಿಂಗಳು ತಡವಾಗಿ ಆರಂಭವಾಗಿತ್ತು. ಬಳಿಕ ಟೋಲ್‌ಗೇಟ್ ಗುತ್ತಿಗೆದಾರರು ಹೈಕೋರ್ಟ್‌ನಲ್ಲಿ ತಜೆಯಾಜ್ಞೆ ತಂದಿದ್ದರು. ಬಳಿಕ ನಡೆದ ಹೋರಾಟದಲ್ಲಿ ಪಕ್ಷಾತೀತವಾಗಿ ಭಾಗವಹಿಸಿ ಟೋಲ್ ವಿರೋಧಿಸಿದ್ದೇವೆ. ಇದೀಗ ಮತ್ತೆ 15 ದಿನಗಳ ಗಡುವು ನೀಡಲಾಗಿದ್ದು, ತೆರವುಗೊಳಿಸದಿದ್ದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಗುರುಪುರ ಯುವ ಕಾಂಗ್ರೆಸ್ ಅಧ್ಯಕ್ಷ ಮುಫೀದ್, ಎಸ್‌ಸಿಎಸ್‌ಟಿ ಘಟಕದ ಮಲ್ಲಿಕಾರ್ಜುನ, ಚಂದ್ರಹಾಸ್ ಮೊದಲಾದವರು ಉಪಸ್ಥಿತರಿದ್ದರು.