ಜಿಲ್ಲೆ

ಹು-ಧಾ ಅವಳಿ ನಗರದಲ್ಲಿ ಸೂರತ್ ಮೂಲದವರು ಪತ್ತೆ

ಮರಿದೇವ ಹೂಗಾರ

ಹುಬ್ಬಳ್ಳಿ: ಧಾರವಾಡ ಜನ್ನತ್ ನಗರದ ಬಿಲಾಲ್ ಹಾಗೂ ಆರೋಗ್ಯ ನಗರದ ಯೂಸುಫಿಯಾ ಮಸೀದಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳು ಸೂರತ್ ಮೂಲದವರು ಎನ್ನುವುದು ಪತ್ತೆಯಾಗಿದೆ. ಯಾವುದೇ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜನ್ನತ್ ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುವ ವ್ಯಕ್ತಿಗಳ ಬಗ್ಗೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಮಾಹಿತ ಕೋರಿ ಪತ್ರ ಬರೆದಿದ್ದರು. ತಕ್ಷಣವೇ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದೇವೆ. ಇವರ ಪೂರ್ವಾಪರ ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ. ಕೆಲವರು ಮಸೀದಿಯಲ್ಲಿ ತರಬೇತಿ ಪಡೆದುಕೊಳ್ಳಲು ಬಂದಿದ್ದಾರೆ. ಈ ಬಗ್ಗೆ ಪಾಲಿಕೆ ವಲಯ ಅಧಿಕಾರಿಗಳು ಸಹ ಅನುಮಾನಸ್ಪದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದುವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಪಾಕಿಸ್ತಾನದ ಮಹಿಳೆಯೊಬ್ಬರು ಇರುವುದನ್ನು ಪತ್ತೆ ಹಚ್ಚಿದ್ದೇವೆ. ಅವರು ದೀರ್ಘಕಾಲದ ವೀಸಾ ಮೇಲೆ ವಾಸವಾಗಿದ್ದಾರೆ. ಅವರ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಬಂದ ಬಳಿಕ ಅವರನ್ನು ವಾಪಸ್ ಕಳಿಸಬೇಕಾ? ಅಥವಾ ಏನು ಮಾಡಬೇಕು? ಎಂಬುದರ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಅತಿ ಹೆಚ್ಚು ಸಿಮ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ನಿಗಾ ಘಟಕ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ತಪ್ಪು ಸಂದೇಶ ಹರಿಬಿಟ್ಟರೆ ಅಂಥವರ ಬಗ್ಗೆ ಮಾಹಿತಿ ನೀಡಬಹುದು. ಅದರ ಲಿಂಕ್ 8296813792 ಪೊಲೀಸ್ ವಾಟ್ಸ್‌ಆ್ಯಪ್‌ಗೆ ಕಳುಹಿಸಿದರೆ ಸಾಕು. ಅಲ್ಲದೇ ರೌಡಿಗಳ ಚಟುವಟಿಕೆ ನಿಯಂತ್ರಣಕ್ಕಾಗಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಡಿಸಿಪಿ ಮಹಾನಿಂಗ ನಂದಗಾಂವಿ, ಎಸಿಪಿ ಶಿವಪ್ರಕಾಸ ನಾಯಕ್ ಇತರರು ಇದ್ದರು.