ಜಿಲ್ಲೆ

ಸುರಲ್ಪಾಡಿ ಹಿಂಸಾತ್ಮಕವಾಗಿ ಅಕ್ರಮ ಜಾನುವಾರು ಸಾಗಾಟ ಗುಂಡು ಹಾರಾಟ ಆರೋಪ

ಮಂಗಳೂರು: ಪಿಕಪ್ ವಾಹನದಲ್ಲಿ 20ರಷ್ಟು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಶುಕ್ರವಾರ ಬೆಳಗ್ಗೆ ಭಜರಂಗದಳದ ಕಾರ್ಯಕರ್ತರು ಸುರಲ್ಪಾಡಿ ಬಳಿ ಪತ್ತೆ ಮಾಡಿ ಬಜಪೆ ಪೊಲೀಸರಿಗೊಪ್ಪಿಸಿದ್ದಾರೆ.

ಮೂಡುಬಿದಿರೆ ಕಡೆಯಿಂದ ಕೈಕಂಬದತ್ತ ಅತಿ ವೇಗವಾಗಿ ಪಿಕಪ್ ವಾಹನ ಚಲಿಸುತ್ತಿದ್ದು, ಸುರಲ್ಪಾಡಿಯಲ್ಲಿ ಪಿಕಪ್ ತಡೆದು ನಿಲ್ಲಿಸಿದ ಕೂಡಲೇ ಚಾಲಕ ಮತ್ತು ಇತರ ಇಬ್ಬರು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಜಾನುವಾರುಗಳು ಕೂಗುತ್ತಿರುವುದು ಕೇಳಿ ಸಾರ್ವಜನಿಕರು ಸಂಶಯಗೊಂಡು ಪಿಕಪ್ ತಡೆದು ನಿಲ್ಲಿಸಿದ್ದಾರೆ. ವಾಹನ ಪರಿಶೀಲನೆ ನಡೆಸಿದಾಗ ತಲೆ ಕೆಳಗಾಗಿಸಿ ಕೈ, ಕಾಲುಗಳನ್ನು ಕಟ್ಟಿ ಹಾಕಿ ಕ್ರೂರ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವಾಹನದ ನಂಬರ್ ಪ್ಲೇಟ್ ತೆಗೆದು, ಜಾನುವಾರುಗಳನ್ನು ವಧೆ ಮಾಡಲು ಸಾಗಾಟ ಮಾಡುತ್ತಿದ್ದರು.

 ಎರಡು ಸಾವು: ಪೊಲೀಸರು ಹಗ್ಗ ಬಿಚ್ಚಿ ನೋಡಿದಾಗ ಕ್ರೂರ ರೀತಿಯಲ್ಲಿ ಕಟ್ಟಿ ಹಾಕಿ ಸಾಗಾಟ ಮಾಡಿದ ಪರಿಣಾಮ ಗಾಯಗೊಂಡು ಎರಡು ಜಾನುವಾರುಗಳು ಮೃತಪಟ್ಟಿವೆ. ಉಳಿದವುಗಳು ನಿತ್ರಾಣಗೊಂಡಿದ್ದವು. ಪಶು ವೈದ್ಯರನ್ನು ಕರೆಸಿ ಉಳಿದ ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಆರೈಕೆ ಮಾಡಲಾಗಿದೆ. ಅವುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ವಾಹನದ ಮೂಲ ನೋಂದಣಿ ಸಂಖ್ಯೆ ಕೆಎ 19 ಎಎಫ್ 1399 ಎಂದು ತಿಳಿದು ಬಂದಿದೆ. ಸಾಗಣೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳನ್ನು ತೌಸೀಫ್ ಪೆರಾಡಿ ಮತ್ತು ಹರಿಣೆ ಪೆರಾಡಿ ಎಂದು ಗುರುತಿಸಲಾಗಿದ್ದು, ಇನ್ನೂ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

  ಗುಂಡು ಹಾರಾಟ?

ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಹಿಂಬದಿಯಲ್ಲಿ ಬೊಲೆರೋ ವಾಹನದಲ್ಲಿ ಹಿಂದೂ ಕಾರ್ಯಕರ್ತರ ಶೈಲಿಯಲ್ಲಿ ಕೇಸರಿ ಶಾಲುಗಳನ್ನು ತಲೆಗೆ ಸುತ್ತಿಕೊಂಡು ಎಸ್ಕಾರ್ಟ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಅದರಲ್ಲಿದ್ದವರು ಗುಂಡು ಹಾರಿಸಿದ್ದಾರೆ ಎಂದು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗುಂಡು ಹಾರಾಟ ನಡೆದಿರುವ ಬಗ್ಗೆ ಯಾವುದೇ ಸಾಕ್ಷಾೃಧಾರಗಳು ಲಭಿಸಿಲ್ಲ ಎಂದು ತಿಳಿಸಿದ್ದಾರೆ.