ನ್ಯಾಮತಿ: ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಚರಂಡಿಯಲ್ಲಿ ಮನೆಬಳಕೆ ನೀರು ಹರಿಯುವ ವಿಚಾರವಾಗಿ ಮಂಗಳವಾರ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗ್ರಾಮದ ಲಲಿತಮ್ಮ ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ನರಸಿಂಹ ತಲೆಮರೆಸಿಕೊಂಡಿದ್ದಾನೆ. ಇಬ್ಬರು ನೆರೆಹೊರೆಯವರು. ಮನೆ ಹಿಂದಿರುವ ಚರಂಡಿಯಲ್ಲಿ ಪಾತ್ರೆ ತೊಳೆದ ನೀರನ್ನು ಹರಿಸುವ ವಿಚಾರಕ್ಕೆ ಜಗಳವಾಗಿದ್ದು, ಇದು ವಿಕೋಪಕ್ಕೆ ತಿರುಗಿ ಮಹಿಳೆ ತಲೆಗೆ ನರಸಿಂಹ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಗೆ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.