ಜಿಲ್ಲೆ

ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕಿದೆ: ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಕಾವೇರಿ ನೀರು ಹಂಚಿಕೆ ಕುರಿತಾಗಿ ರಾಜ್ಯದ ಮುಖ್ಯಮಂತ್ರಿಗಳು ಮೂರು ದಿನ ದೆಹಲಿಯಲ್ಲಿದ್ದು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯ ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ನ ಆದೇಶವನ್ನು ನಾವು  ಪಾಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. 

ಸುದ್ಧಿಗಾರೊಂದಿಗೆ ಮಾತನಾಡಿ, ಮಳೆಗಾಗಿ ಪ್ರಾರ್ಥಿಸಬೇಕು. ರಾಜ್ಯಕ್ಕೆ ಅನ್ಯಾಯ ಆಗಬಾರದು ಎಂಬುದು ನನ್ನ ನಿಲುವಾಗಿದೆ. ಕಾಂಗ್ರೆಸ್ ಜನಪರವಾಗಿದೆ,‌ ಜನರನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯವಿಲ್ಲ.  ನೀರಾವರಿ ಮಂತ್ರಿಗಳು ಆ ಭಾಗದ ಜನನಾಯಕರು ಕೇಂದ್ರಕ್ಕೆ ಹೋಗಿದ್ದಾರೆ,‌  ರಾಜ್ಯ ಸರ್ಕಾರ ಈ ಬಗ್ಗೆ ಕೈಕಟ್ಟಿ ಕುಳಿತಿಲ್ಲ. ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದ ಅವರು, ಸುಪ್ರೀಂ ಕೋರ್ಟ್ ನಲ್ಲಿ ವಾದ ಸರಿಯಾಗಿದೆಯೋ ಮಂಡನೆ ಸರಿಯಾಗಿಲ್ಲವೋ ಎಂಬುವ ಚರ್ಚೆ ಅಪ್ರಸ್ತುತವಾಗಿದೆ‌ ಮುಂದೆ ಏನಾಗಬೇಕು ಎಂಬುದಷ್ಟೇ ಸದ್ಯ ಚರ್ಚಿಸಬೇಕಾದ ವಿಚಾರ ಎಂದರು. 

ನೈತಿಕ ಪೋಲಿಸ್ ಗಿರಿ ಸಹಿಸಲ್ಲ
ಕಾಪು ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ವೀಡಿಯೋ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ನೈತಿಕ ಪೊಲೀಸ್ ಗಿರಿಯನ್ನು ನಾವು ಸಹಿಸಲ್ಲ. ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಕಾನೂನಿಗೆ ತಲೆಬಾಗುವುದು ಭಾರತೀಯ ಪ್ರಜೆಯ ಕರ್ತವ್ಯ ಎಂದರು. 

ಸಂಸತ್ ನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಬಿಲ್ ಪಾಸ್ ಬಗ್ಗೆ ಪ್ರತಿಕ್ರಿಯಿಸಿ ಪ್ರಧಾನಿ ಮೋದಿ ಅವರು ಈ ಆದೇಶವನ್ನು ತೆಗೆದುಕೊಂಡು ಬಂದಿದ್ದಾರೆ. ಮಹಿಳೆಯಾಗಿ ನಾನು ಇದನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ, ಕಾಂಗ್ರೆಸ್ ಹಿಂದಿನಿಂದಲೂ ಮಹಿಳೆಯರ ಪರವಾಗಿರುವ ಪಕ್ಷವಾಗಿದೆ. ಈ ಬಿಲ್ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಪ್ರಯತ್ನ ಪಟ್ಟಿತ್ತು. ರಾಜೀವ್ ಗಾಂಧಿ 50% ಶೇಕಡಾ ಮೀಸಲಾತಿಯನ್ನು ತೆಗೆದುಕೊಂಡು ಬಂದಿದ್ದರು. ಇಂಥ ಕೆಲಸವನ್ನು ಮಾಡಲು ಬಹಳ ದೊಡ್ಡ ಶಕ್ತಿ ಬೇಕಾಗುತ್ತದೆ. ನಾನು ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ, ಇಂದಿರಾಗಾಂಧಿ ಉಳುವವನೇ ಒಡೆಯ ಎಂಬ ಕಾನೂನು ಜಾರಿಗೆ ತಂದರು,‌ರಾಜೀವ್ ಗಾಂಧಿ 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ಜಾರಿಗೆ ತಂದರು,‌ಮೋದಿ ಅವರು ಬಹಳ ದೊಡ್ಡ ಕೆಲಸವನ್ನ ಮಾಡಿದ್ದಾರೆ ಎಂದರು. 

ಬೆಳಗಾವಿ ಜಿಲ್ಲೆಯಲ್ಲಿ 14 ತಾಲ್ಲೂಕುಗಳು ಬರ ಪಟ್ಟಿಯಲ್ಲಿದ್ದು, ಬರಪೀಡಿತ ಪಟ್ಟಿ ಘೋಷಣೆ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಮಳೆ ಪ್ರಮಾಣ ಅಂಕಿ ಅಂಶಗಳನ್ನು ತೆಗೆದುಕೊಂಡು ಘೋಷಣೆ ಮಾಡಲಾಗುತ್ತದೆ. ಎರಡನೇ ಲಿಸ್ಟ್ ಹೊರಬರುತ್ತದೆ, ಮಳೆ ಬರದಿದ್ದರೆ ಇನ್ನೂ ಕೆಲ ಜಿಲ್ಲೆ ಹೆಸರುಗಳು ಕೂಡ ಘೋಷಣೆಯಾಗುತ್ತದೆ ಎಂದರು.