ಜಿಲ್ಲೆ

ಸುಪ್ರಜ ಗುರುಕುಲ ಶಾಲೆಯಲ್ಲಿ ಮಕ್ಕಳ ಸಂತೆ

ಶನಿವಾರಸಂತೆ: ಇಲ್ಲಿನ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ವಿದ್ಯಾಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಆರೋಗ್ಯ ತಪಾಸಣಾ ಶಿಬಿರ, ಶಾಲಾ ವಾರ್ಷಿಕೋತ್ಸವ ಅಂಗವಾಗಿ ಕ್ರೀಡಾಕೂಟ ಹಾಗೂ ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಣ್ಣು ಮತ್ತು ದಂತ ತಪಾಸಣೆ ನಡೆಸಲಾಯಿತು. ಹಾಸನದ ವಿ ಕೇರ್ ಸೂಪರ್ ಸ್ಪೇಷಾಲಿಟಿ ದಂತ ಆಸ್ಪತ್ರೆ ಮತ್ತು ನೇತ್ರ ಆಸ್ಪತ್ರೆಯ ತಜ್ಞರು ತಪಾಸಣೆ ನಡೆಸಿದರು.

ಶಾಲಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆ ವತಿಯಿಂದ ಪಾಲಕರಿಗಾಗಿ ವಾಲಿಬಾಲ್, ಥ್ರೋಬಾಲ್, ಓಟ ಸೇರಿದಂತೆ ವಿವಿದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಶಾಲೆಯ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ನಡೆಯಿತು. ಸೊಪ್ಪು, ತರಕಾರಿ, ಹಣ್ಣು, ಮನೆಯಲ್ಲಿ ತಯಾರಿಸಿದ್ದ ತಿನಿಸುಗಳನ್ನು ತಂದು ಮಾರಾಟ ಮಾಡಿದರು. ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಸಂತೆಯಲ್ಲಿ ವಸ್ತುಗಳನ್ನು ಖರೀದಿಸಿದರು. ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.