ಜಿಲ್ಲೆ

ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಹಕಾರ

ಬೇಲೂರು: ಬ್ಯಾಂಕ್‌ಗಳು ಮಹಿಳೆಯರಿಗೆ ಸಾಲ ಸೌಲಭ್ಯ ಕೊಡುವಲ್ಲಿ ಹಿಂದೇಟು ಹಾಕಿದರೂ ಪರ‌್ಯಾಯವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಂಘಗಳ ಮೂಲಕ ಆರ್ಥಿಕ ನೆರವು ಒದಗಿಸುತ್ತಿರುವುದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಮಟ್ಟದ ಜ ್ಞಾನ ವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ, ಬ್ಯೂಟಿ ಪಾರ್ಲರ್, ಟೈಲರಿಂಗ್ ಸೇರಿದಂತೆ ಅನೇಕ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಧರ್ಮಸ್ಥಳ ಸಂಸ್ಥೆ ಸಹಕಾರ ನೀಡುತ್ತಿದೆ. ಧರ್ಮಸ್ಥಳ ಸಂಘದಿಂದ ರಾಜ್ಯದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುವುದರ ಜತೆಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗುತ್ತಿದ್ದಾರೆ ಎಂದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಮಾತನಾಡಿ, ಬೇಲೂರಿನಲ್ಲಿ ಸ್ವಸಹಾಯ ಸಂಘಗಳು ಉತ್ತಮವಾಗಿ ನಡೆಯಬೇಕೆಂದರೆ ಸದಸ್ಯರು ವಾರದ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಸೇವಾ ಪ್ರತಿನಿಧಿ ಸಭೆ ನಡೆಸದಿದ್ದಲ್ಲಿ ಯೋಜನಾಧಿಕಾರಿಗಳ ಗಮನಕ್ಕೆ ತರಬೇಕು. ಸಂಘಗಳು ಎ ಗ್ರೇಡಿಗೆ ಹೋಗಲು ಸಂಘದ ಪ್ರತಿನಿಧಿಗಳು ನಡೆದುಕೊಳ್ಳಬೇಕು ಎಂದರು.


ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಬಾಲ್ಯವಿವಾಹ ತಡೆಗಟ್ಟುವಲ್ಲಿ ಮಹಿಳೆಯರು ಮುಂದೆ ಬರಬೇಕು. ಹಿಂದೆ ಮಹಿಳೆಯರು ಹೆದರುವ ಸಾಧ್ಯತೆಯಿತ್ತು. ಈಗ ಮಹಿಳೆಯರು ಯಾವುದೇ ರಂಗದಲ್ಲಿ ಭಯಪಡದೆ ಕಾರ್ಯೋನ್ಮುಖರಾಗುತ್ತಿದ್ದಾರೆ. ವಿಶೇಷವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಚ್ಚಿನ ಸಹಕಾರ ನೀಡುತ್ತಿದೆ ಎಂದರು.
ಯೋಜನಾಧಿಕಾರಿ ಚಂದ್ರಶೇಖರ್, ವಕೀಲೆ ಗಿರಿಜಾಂಬಿಕಾ, ಪ್ರಾಂಶುಪಾಲೆ ನಾಗಶ್ರೀ ಇತರರಿದ್ದರು.