ಹೊಳೆನರಸೀಪುರ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಲೈಂಗಿಕ ಪ್ರಕರಣ ಖಂಡಿಸಿ ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಮೇ 30 ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ತಾಲೂಕು ದಲಿತ ಸಂಘರ್ಷ ಸಮಿತಿಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಚಿನ್ನಸ್ವಾಮಿ ತಿಳಿಸಿದರು.
ಪ್ರಕರಣದಿಂದ ಜಿಲ್ಲೆಯ ಮರ್ಯಾದೆ ಸಂಪೂರ್ಣ ಮಣ್ಣು ಪಾಲಾಗಿದೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ವಿಡಿಯೋ ಮಾಡಿದ ವ್ಯಕ್ತಿ ಹಾಗೂ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ನೂರಾರು ಮಹಿಳೆಯರ ಘನತೆ ಕುಂದಲು ಕಾರಣರಾದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಈಗಾಗಲೇ ರಾಜಕೀಯ ಪ್ರವೇಶಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡದಿದ್ದರೆ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೋವಿಂದರಾಜು ಮಾತನಾಡಿ, ಪ್ರತಿಭಟನೆಯಲ್ಲಿ ಭಾಗವಹಿಸಲು ವಾಹನ ವ್ಯವಸ್ಥೆ ಮಾಡಲಾಗಿದ್ದು ತಾಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು.
ದಸಂಸ ಮುಖಂಡರಾದ ರವಿಕುಮಾರ್, ಚಂದ್ರಶೇಖರ್, ಅನಂತ, ಬೈರಯ್ಯ ಉಪಸ್ಥಿತರಿದ್ದರು.