ಜಿಲ್ಲೆ

ಒನ್ ಸೈಡ್ ಪಾರ್ಕಿಂಗ್ ವ್ಯವಸ್ಥೆಗೆ ಸಹಕರಿಸಿ

ಬಸವರಾಜ ವೀರಪ್ಪ ಗರಗ

ಶಿರಹಟ್ಟಿ: ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ಸುಗಮವಾಗಿಸಲು ಮತ್ತು ಸಾರ್ವಜನಿಕರಿಗೆ ಮುಕ್ತ ಸಂಚಾರ ಅವಕಾಶ ಕಲ್ಪಿಸಲು ಒನ್ ಸೈಡ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಈ ನಿಯಮಕ್ಕೆ ಸಹಕರಿಸಬೇಕು ಎಂದು ಶಿರಹಟ್ಟಿ ಪಿಎಸ್​ಐ ಚೆನ್ನಯ್ಯ ದೇವೂರ ಕೋರಿದರು.

ಗುರುವಾರ ನಡೆದ ಕಾರ್ಯಾಚರಣೆಯಲ್ಲಿ, ದ್ವಿಚಕ್ರ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕೆಂಬ ಜಾಗೃತಿ ಮೂಡಿಸಲಾಯಿತು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದು, ಹೆಲ್ಮೆಟ್​ನ ಲಾಭಗಳನ್ನು ವಿವರಿಸಿ, ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು.

ನೆಹರು ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿದಿನ ನೂರಾರು ಬೈಕ್ ಸವಾರರು ಸಂಚರಿಸುತ್ತಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ಅಡಚಣೆಯಾಗುತ್ತಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದೊಂದು ಬದಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನಸಂದಣಿ ಹೆಚ್ಚಿರುವ ಇತರ ಪ್ರದೇಶಗಳಲ್ಲೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ಸಹಕಾರ ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದರು.