ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಸಚಿವ ಎಂ.ಬಿ. ಪಾಟೀಲ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಿ ಮಾತನಾಡಿದರು. ಸಿದ್ದು ಗೌಡನವರ, ಕರೀಂ ಏಳಾಪುರ, ಪಿ.ಆರ್​. ಆಯತವಾಡ ಮತ್ತಿತರರಿದ್ದಾರೆ. 
ಜಿಲ್ಲೆ

ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್​ ಬೆಂಬಲಿಸಿ

ಗಿರೀಶ ಸಗರ

ತಿಕೋಟಾ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತಹಾಕಿ ಗೆಲ್ಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್​ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ದೇಶದಲ್ಲಿ ಮೋದಿ ಅಧಿಕಾರಕ್ಕೆ ಬರುವ ಮುಂಚೆಯೇ ಕಾಂಗ್ರೆಸ್​ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ. ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ, ರೇಷನ್​ ಕಾರ್ಡ್​, ವೃದ್ಧಾಪ್ಯ ವೇತನ ಮತ್ತು ಭೂಮಿ ಹಂಚಿಕೆ ಮಾಡಿದ್ದರು.

ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಸಂವಹನ ಮತ್ತು ಸಂಪರ್ಕ ಕ್ರಾಂತಿ, ನಂತರ ಪ್ರಧಾನಿಯಾದ ಮನಮೋಹನ ಸಿಂಗ್​ ಅವರು ರೈತರ 72,000 ಕೋಟಿ ರೂ. ಸಾಲಮನ್ನಾ ಮಾಡಿದರು. ಆದರೆ, ಕಳೆದ 10 ವರ್ಷದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ರೈತರ ಬದಲು ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಹಿಂದಿನ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಂದ ರೈತರ ಆದಾಯ ದ್ವಿಗುಣವಾಗಿದ್ದು, ಹಿಂದೆ ಬೇಸಿಗೆಯಲ್ಲಿ 711 ಟ್ಯಾಂಕರ್​ ನೀರು ಪೂರೈಕೆಯಾಗುತ್ತಿದ್ದ ಜಿಲ್ಲೆಯಲ್ಲಿ ಈಗ ಕೇವಲ 38 ಟ್ಯಾಂಕರ್​ ಬಳಕೆಯಾಗುತ್ತಿದೆ.

ಅದನ್ನು ಕೂಡಾ ಮುಂದಿನ ಆರು ತಿಂಗಳಲ್ಲಿ 10 ಕ್ಕೆ ಇಳಿಸುವ ಮೂಲಕ ಬಾಕಿ ಉಳಿದ ರೈತರ ಜಮೀನಿಗೆ ನೀರು ಹರಿಸಲು ಹೊಲಗಾಲುವೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೆಲಸ ಮಾಡಲು ನಮ್ಮ ಪಕ್ಷದ ರಾಜು ಆಲಗೂರ ಅವರನ್ನು ಆಯ್ಕೆ ಮಾಡುವಂತೆ ಅವರು ಹೇಳಿದರು.

ಯಲ್ಲಾಲಿಂಗ ಹೊನವಾಡ, ಸಿದ್ದನಗೌಡ ರುದ್ರಗೌಡರ, ಪಿ.ಆರ್​. ಆಯತವಾಡ, ರಾಮನಿಂಗ ಎ. ಮಸಳಿ, ಆರ್​.ಎನ್​. ಬಿರಾದಾರ ಮಾತನಾಡಿದರು.

ತಿಕೋಟಾ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸಿದ್ದು ಗೌಡನವರ, ಕರೀಂ ಏಳಾಪುರ, ಪ್ರಕಾಶ ಆಯತವಾಡ, ಅಮೋ ಗೌಡನವರ, ಮುರಿಗೆಪ್ಪ ಅಕ್ಕಿ, ಈರನಗೌಡ ಬಿರಾದಾರ, ಕಾಸು ಡೆಂಗಿನವರ, ಅನಿಲ ಕಾಂಬಳೆ, ಅಶೋಕ ರುದ್ರಗೌಡರ, ಅಮಗೊಂಡಗೌಡ ಪಾಟೀಲ, ಜೆ.ಎಂ. ಪಾಟೀಲ, ಎಂ.ಎಸ್​. ಲೋಣಿ, ಶಂಕರ ಚಿನಗುಂಡಿ, ಸುಭಾಷ ಪಾಟೀಲ, ಮಧುಗೊಂಡ ಬಿರಾದಾರ, ರಾಜು ಬಿರಾದಾರ ಮತ್ತಿತರರಿದ್ದರು.