ಜಿಲ್ಲೆ

'ನಮ್ಮನ್ನು ಕಾಯುವ ಅಭ್ಯರ್ಥಿ ಬೆಂಬಲಿಸಿ'

ಆರ್.ಕೃಷ್ಣ

ಮೈಸೂರು
ದೇಶದ ಆರ್ಥಿಕ ಸ್ಥಿತಿಗತಿ ಅಧೋಗತಿಯತ್ತ ಸಾಗುತ್ತಿದ್ದು, ಹೀಗಾಗಿ ಜನತೆ ವಿವೇಚನೆಯಿಂದ ನಮ್ಮನ್ನು ಕಾಯುವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಮನವಿ ಮಾಡಿದರು.
ಈ ಚುನಾವಣೆ ವೇಳೆ ಶೋಷಿತ ಸಮುದಾಯಗಳು ನಿರ್ಣಾಯಕ ಪಾತ್ರ ವಹಿಸಬೇಕು. ಕಳೆದ 10 ವರ್ಷಗಳಲ್ಲಿ ಬಿಜೆಪಿ ನಿರೀಕ್ಷಿತ ರೀತಿ ಆಡಳಿತ ನಡೆಸಿಲ್ಲ. ನೀಡಿದ್ದ ಭರವಸೆ ಈಡೇರಿಸುವ ಬದಲಾಗಿ ಜನವಿರೋಧಿಯಾಗಿ ಆಡಳಿತ ನಡೆಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಲ್ಲದೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸತತ ದ್ರೋಹ ಮಾಡುತ್ತಾ ಬಂದಿದೆ. ಎಲ್ಲರ ಆದಾಯ ಕುಸಿದಿರುವ ವೇಳೆ ಮೀಸಲಾತಿ ಇಲ್ಲವಾಗಿದೆ. ಪ್ರಧಾನಿಯ ಆಪ್ತರ ಆಸ್ತಿ ದುಪ್ಪಟ್ಟಾಗಿ ಅತಿ ಶ್ರೀಮಂತರಾಗಿದ್ದಾರೆ. ಜತೆಗೆ ಬಿಜೆಪಿ ಸಂಪತ್ತನ್ನು ಕ್ರೋಡೀಕರಿಸಿಕೊಂಡು ಅತಿ ಶ್ರೀಮಂತ ಪಕ್ಷವಾಗಿ ಬೆಳೆದಿದ್ದು, ಪ್ರಜಾತಂತ್ರದ ಮೌಲ್ಯಗಳನ್ನು ಗಾಳಿಗೆ ತೂರಿದೆ ಎಂದು ದೂರಿದರು.
ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ, ಎನ್. ಅನಂತನಾಯ್ಕ್ ಇತರರು ಇದ್ದರು.