ಜಿಲ್ಲೆ

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ


ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟವಾದ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಮಡಿಕೇರಿಯಲ್ಲಿ ಬುಧವಾರ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ನಗರದ ಸುದರ್ಶನ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡಿತು. ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಕ್ರಿಯಾ ಸಮಿತಿ (ಜೆಸಿಟಿಯು) ಸಂಚಾಲಕ ಎಚ್.ಬಿ.ರಮೇಶ್ ಮಾತನಾಡಿ, ಅಖಿಲ ಭಾರತ ಮಟ್ಟದಲ್ಲಿ ಸುಮಾರು 30-35 ಕೋಟಿ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆೆ. ಅದರಂತೆ ಕೊಡಗಿನಲ್ಲೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ವೇತನ 21 ಸಾವಿರ ರೂ. ಜಾರಿಯಾಗಬೇಕು. ಕಾರ್ಮಿಕರ ಕಾನೂನಿನ ತಿದ್ದುಪಡಿಯನ್ನು ನಿಲ್ಲಿಸಬೇಕು. ಗಗನಕ್ಕೇರುತ್ತಿರುವ ಬೆಲೆ ಏರಿಕೆ ನಿಯಂತ್ರಿಸಬೇಕು. ಉದ್ಯೋಗದ ಭದ್ರತೆ ನೀಡಬೇಕು. ಮಾಸಿಕ ಪಿಂಚಣಿ 10 ಸಾವಿರ ರೂ.ಖಾತ್ರಿಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಂಘದ ಅಧ್ಯಕ್ಷೆ ಕೆ.ಎಸ್.ಮುತ್ತಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಕಡಿಮೆ ವೇತನದೊಂದಿಗೆ ಸರ್ಕಾರದ ಯಾವುದೇ ಸೇವೆ ಸೌಲಭ್ಯಗಳು ದೊರಕದೇ ಇರುವುದರಿಂದ ಜೀವನ ಸಾಗಿಸಲು ಕಷ್ಟವಾಗಿದೆ. ಆದ್ದರಿಂದ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ ಮಾತನಾಡಿ, 15 ತಿಂಗಳಿಂದ ಇಲ್ಲಿವರೆಗೂ ನಯಾಪೈಸೆ ಹಣ ನಮ್ಮ ಕೈ ಸೇರಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೆವು. ಆದರೂ ಪ್ರಯೋಜನವಾಗಿಲ್ಲ. ನಮಗೆ ಸಿಗಬೇಕಾದ ಹಣ ಕೈಸೇರುವವರೆಗೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದುಕೊಂಡು ಹೋರಾಟ ಮಾಡುವುದಾಗಿ ಒಗ್ಗಟ್ಟಾಗಿ ತೀರ್ಮಾನಿಸಿದ್ದೇವೆ. ದುಡಿದ ಹಣ ಆಶಾಕಾರ್ಯಕರ್ತೆಯರ ಖಾತೆಗೆ ಬಂದರೆ ಮೊದಲಿನಂತೆ ಕೆಲಸಕ್ಕೆ ತೆರಳುತ್ತೇವೆ. ನಮ್ಮ ಹೋರಾಟ ಫಲಪ್ರದವಾಗುವ ನಿರೀಕ್ಷೆ ಇದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಎ.ಮಹದೇವ, ಸಂಚಾಲಕ ಬಿ.ರವಿ, ತಾಲೂಕು ಕಾರ್ಯದರ್ಶಿ ಅಕ್ಕಮ್ಮ ಮತ್ತಿತರರು ಇದ್ದರು.
ಅಂಚೆ ನೌಕರರ ಸಂಘ ಬೆಂಬಲ: ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೊಡಗು ಜಿಲ್ಲಾ ಅಂಚೆ ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿತು. ಮಡಿಕೇರಿಯ ಅಂಚೆ ಕಚೇರಿಗೆ ಬುಧವಾರ ಬೀಗ ಜಡಿದು ಕಚೇರಿಯ ಮುಂಭಾಗ ಜಮಾಯಿಸಿದ ನೌಕರರು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ಜಿಲ್ಲೆಯ ಅಂಚೆ ಸಮನ್ವಯ ಸಮಿತಿ, ಅಖಿಲ ಭಾರತ ಅಂಚೆ ನೌಕರರ ಸಂಘದ ಕೊಡಗು ವಿಭಾಗ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಕೊಡಗು ವಿಭಾಗ, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕೊಡಗು ವಿಭಾಗ, ರಾಷ್ಟ್ರೀಯ ಅಂಚೆ ಗ್ರಾಮೀಣ ನೌಕರರ ಸಂಘದ ಕೊಡಗು ವಿಭಾಗದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಜೆಸಿಎ ಹಾಗೂ ಎಐಪಿಇಯು ಕಾರ್ಯದರ್ಶಿ ಟಿ.ಪಿ.ಶ್ರೀನಿವಾಸ್, ಉಪಾಧ್ಯಕ್ಷ ಬೇಬಿ ಜೋಸೆಫ್, ಜೆಸಿಎ ಹಾಗೂ ಎನ್‌ಯುಪಿಇ ಅಧ್ಯಕ್ಷ ಕೆ.ಬಿ.ಗಣೇಶ್, ಕಾರ್ಯದರ್ಶಿ ಎಂ.ಎಸ್.ಮಂಜುನಾಥ್, ಜೆ.ಸಿ.ಎ.ಸಲಹೆಗಾರರಾದ ಮೋಹನ್ ಎಂ.ಕೆ, ವಿಶಾಲಾಕ್ಷಿ, ರಾಧಾಕೃಷ್ಣ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಅಂಚೆ ನೌಕರರು ಇದ್ದರು.
ಬಸ್ಸಿಗೆ ಕಲ್ಲು: ಮಡಿಕೇರಿ ನಗರದ ಹೊರವಲಯದ ಚೈನ್‌ಗೇಟ್ ಬಳಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದರು.
ಮಡಿಕೇರಿಯಿಂದ ಮೈಸೂರಿಗೆ ಸರ್ಕಾರಿ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬಸ್‌ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಬಸ್ಸಿನ ಮುಂಭಾಗದ ಗ್ಲಾಸ್‌ಗೆ ಸಣ್ಣ ಪ್ರಮಾಣದ ಹಾನಿಯಾಯಿತು. ಮಂಡ್ಯ ಜಿಲ್ಲೆಯ ಪಾಂಡವಪುರ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್ ಇದಾಗಿದ್ದು. ಬಸ್ ಚಾಲಕ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.