ಜಿಲ್ಲೆ

ರಾಮನಗರ ಮೊದಲ ರೇಷ್ಮೆ ಕ್ಷೇತ್ರಕ್ಕೆ ಬೇಕಿದೆ ಕಾಯಕಲ್ಪ

ಗಂಗಾಧರ ಬಿ ವಿ

ನಿರ್ವಹಣೆ ಕೊರತೆ, ಹಲವಾರು ಸಮಸ್ಯೆಗಳು

ಶಿಥಿಲಗೊಂಡ ಕಟ್ಟಡ ಖಾಲಿ ಮಾಡಿದ ಸಿಬ್ಬಂದಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಕೆ.ಪಿ. ದೊಡ್ಡಿ ಬಳಿಯ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರ ನಿರ್ವಹಣೆ ಇಲ್ಲದೆ ಸೊರಗಿದ್ದು ಸರ್ಕಾರ ಕಾಯಕಲ್ಪ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ರಾಮನಗರ-ಕನಕಪುರ ರಸ್ತೆ ಬಳಿ ಜಿಲ್ಲೆಯಲ್ಲೇ ಮೊದಲೆನಿಸಿದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವನ್ನು ಸುಮಾರು 24 ಎಕರೆ ಜಾಗದಲ್ಲಿ 1967ರಲ್ಲಿ ಆರಂಭಿಸಲಾಯಿತು.  ಇಲ್ಲಿ ಮೊಟ್ಟೆ ಉತ್ಪಾದನೆ ಮತ್ತು ಉತ್ತಮ ತಳಿಯ ಬಿತ್ತನೆ ಬಿಳಿ ಗೂಡು (ಸಿಎಸ್‌ಆರ್) ರೇಷ್ಮೆ ಬೆಳೆಯಲಾಗುತ್ತಿದೆ. ಆದರೆ ಈಗ ಬಿಳಿ ಗೂಡು ಬಿತ್ತನೆ ಮಾತ್ರ ಉತ್ಪಾದಿಸಲಾಗುತ್ತಿದೆ.

ರೇಷ್ಮೆ ಕ್ಷೇತ್ರದಲ್ಲಿ ಹುಳು ಸಾಕಣೆ ಮನೆ, ಚಾಕಿ ಮನೆ, ಚಂದ್ರಿಕೆ, ಮನೆ, ಗ್ರೈನೇಜ್ ಸೇರಿ ಕ್ಷೇತ್ರದ ಸಿಬ್ಬಂದಿ ಮತ್ತು ಇಲಾಖೆ ಇತರ ಅಧಿಕಾರಿಗಳ ವಸತಿ ಗೃಹ ಸೇರಿ 28 ಕಟ್ಟಡಗಳಿವೆ. ಜತೆಗೆ ರೇಷ್ಮೆ ತೋಟ, ಬೋರ್‌ವೆಲ್, ಪಂಪ್‌ಹೌಸ್ ನೀರಿನ ಮನೆ ವಿಶಾಲ ಸುಂದರ ಮರಗಿಡಗಳ ಮಧ್ಯೆ ಕ್ಷೇತ್ರ ನಿರ್ಮಾಣವಾಗಿದೆ.

ಈ ಕಟ್ಟಡಗಳು ಮಳೆ ಬಂದರೆ ಸೋರುತ್ತವೆ, ವಿದ್ಯುತ್ ಸೇರಿ ಹಲವಾರು ಸಮಸ್ಯೆಗಳ ಮಧ್ಯೆ ಇಲ್ಲಿರುವ ಸಿಬ್ಬಂದಿ ಕೆಲಸ ನಿರ್ವಹಿಸಬೇಕಿದೆ. ಸರ್ಕಾರ ಕೂಡಲೇ ಕ್ಷೇತ್ರಕ್ಕೆ ಕಾಯಕಲ್ಪ ನೀಡಬೇಕಿದೆ. ಹಲವಾರು ವರ್ಷಗಳಿಂದ ನಡೆದು ಬಂದ ಕ್ಷೇತ್ರ ಮರೆಯಾಗುತ್ತದೆ ಎಂದು ಸಾರ್ವಜನಿಕರು ಬೇಸರ ಹೊರಹಾಕುತ್ತಾರೆ.

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಷೇತ್ರ ರೇಷ್ಮೆ ಇಲಾಖೆ ಮುತುವರ್ಜಿ ವಹಿಸದ ಕಾರಣ ನಿರ್ವಹಣೆ ಇಲ್ಲದೆ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ವಸತಿ ಗೃಹಗಳಲ್ಲಿ ವಾಸವಿದ್ದ ಸಿಬ್ಬಂದಿ ಖಾಲಿ ಮಾಡಿದ್ದಾರೆ. ಈ ಕ್ಷೇತ್ರವನ್ನು ಹೊರಗಿನಿಂದ ನೋಡಿದರೆ ಚೆನ್ನಾಗಿರಬಹುದೇನೋ ಅನ್ನಿಸುತ್ತದೆ. ಆದರೆ, ಒಳಹೊಕ್ಕು ನೋಡಿದರೆ ಅದರ ನಿಜ ರೂಪ ತಿಳಿಯುತ್ತದೆ.

ಕ್ಷೇತ್ರದ ಸುತ್ತಲಿನ ಕಾಂಪೌಂಡ್ ಅನ್ನು ಹೊಸದಾಗಿ ಕಟ್ಟಿ ಬಣ್ಣ ಬಳಿದಿದ್ದಾರೆ. ಒಳಗೆ ಪಾಳುಬಿದ್ದ, ನಿರ್ವಹಣೆ ಇಲ್ಲದೆ ಸೊರಗಿದ ಕಟ್ಟಡಗಳು ಕಾಣುತ್ತವೆ. ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲೇ ಬಿತ್ತನೆ ಗೂಡು ಬೆಳೆಯುತ್ತಿರುವುದನ್ನು ಕಾಣಬಹುದು.

4 ಸಿಬ್ಬಂದಿ, 3 ಕಟ್ಟಡದಲ್ಲಿ ಕಾರ್ಯ

ನಾಲ್ವರು ಸಿಬ್ಬಂದಿ ಇದ್ದು, ವರ್ಷಕ್ಕೆ (ಬೇಸಿಗೆ ಕಾಲ ಹೊರತುಪಡಿಸಿ) 300 ಮೊಟ್ಟೆ ಬಿಳಿಗೂಡು ಉತ್ಪಾದಿಸಲಾಗುತ್ತಿದೆ. ಮೊದಲು 400 ಮೊಟ್ಟೆ ಗೂಡು ಉತ್ಪಾದನೆ ಮಾಡಲಾಗುತ್ತಿತ್ತು. ಕಟ್ಟಡ ಕೊರತೆಯಿಂದ ಉತ್ಪಾದನೆ ಕಡಿಮೆಯಾಗಿದ್ದು, ಮೂರು ಕಟ್ಟಡಗಳನ್ನು ಬಳಸಿಕೊಂಡು ಅದರಲ್ಲಿ ಒಂದನ್ನು ಕಚೇರಿ ಮಾಡಿಕೊಂಡಿರುವ ಸಿಬ್ಬಂದಿ, ಉಳಿದ ಎರಡರಲ್ಲಿ ಬಿತ್ತನೆ ಗೂಡು ಬೆಳೆದು ಆನೇಕಲ್ ಬಳಿಯಿರುವ ರೇಷ್ಮೆ ಬಿತ್ತನೆ ಕೋಠಿಗೆ ಕಳಿಸುತ್ತಿದ್ದಾರೆ.

ಕೆ.ಪಿ. ದೊಡ್ಡಿ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಇರುವ ಕಟ್ಟಡಗಳನ್ನೇ ಉಪಯೋಗಿಸಿಕೊಂಡು ಸಿಎಸ್‌ಆರ್ ಬಿತ್ತನೆ ಗೂಡು ಬೆಳೆಯಲಾಗುತ್ತಿದೆ. ಇಲ್ಲಿನ ಕಟ್ಟಡ ನಿರ್ವಹಣೆ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಲಿಖಿತವಾಗಿ ತಿಳಿಸಲಾಗಿದೆ. 
ಉಮೇಶ್, ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ. ರಾಮನಗರ ವಿಭಾಗ

ಜಿಲ್ಲೆಯಲ್ಲಿಯೇ ಉತ್ತಮವಾದ 24 ಎಕರೆ ಪ್ರದೇಶ ವಿಸ್ತೀರ್ಣದ ಕ್ಷೇತ್ರವನ್ನು ರೇಷ್ಮೆ ಇಲಾಖೆ ನಿರ್ವಹಣೆ ಮಾಡದೆ ನೇಪಥ್ಯಕ್ಕೆ ಸೇರುವಂತೆ ಮಾಡಿದೆ. ಇಂತಹ ವಿಶಾಲ ಪ್ರದೇಶ, ನೀರಾವರಿ ಸೌಲಭ್ಯ, ಕಟ್ಟಡಗಳನ್ನು ಬಳಸಿಕೊಂಡು ಕಾರ್ಯಚಟುವಟಿಕೆ ಮಾಡುವಲ್ಲಿ ರೇಷ್ಮೆ ಇಲಾಖೆ ವಿಫಲವಾಗಿದೆ. 
ಎಲ್.ಎಂ.ಸಂತೋಷ್, ಲಕ್ಕೋಜನಹಳ್ಳಿ

ಪ್ರಸ್ತುತ ರೈತರು ಖಾಸಗಿ ರೇಷ್ಮೆ ಚಾಕಿ ಪಡೆಯಲು ಸಾವಿರಾರು ರೂ. ವ್ಯಯಿಸಬೇಕಿದೆ. ರೇಷ್ಮೆ ಇಲಾಖೆ ಕೂಡಲೇ ಇಲ್ಲಿರುವ ಜಾಗ ಬಳಸಿಕೊಂಡು ಹೊಸ ಕಟ್ಟಡ ಕಟ್ಟಿ ಸರ್ಕಾರದಿಂದಲೇ ಚಾಕಿ ಮರಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಿದರೆ ಒಂದಷ್ಟು ಮಂದಿಗೆ ಉದ್ಯೋಗ ಮತ್ತು ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ.

ಕಾಳುನಾಯ್ಕ, ರೇಷ್ಮೆಬೆಳೆಗಾರ, ದೇವರದೊಡ್ಡಿ