ಅರಸೀಕೆರೆ: ಕನ್ನಡ ಸಾಹಿತ್ಯದ ತೇರು ಎಳೆಯಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಂಟನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಸಂಬಂಧ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ, ಬರ ಸೇರಿದಂತೆ ಕೆಲ ಕಾರಣಗಳಿಂದಾಗಿ ಸಮ್ಮೇಳನ ಆಯೋಜನೆಗೆ ಹಿನ್ನಡೆಯಾಗಿದೆ. ನೆಲ, ಜಲ, ಭಾಷೆಯ ವಿಷಯದಲ್ಲಿ ಕನ್ನಡ ಮನಸ್ಸುಗಳು ಒಗ್ಗೂಡಿ ಕೆಲಸ ಮಾಡಬೇಕು. ಕವಿಗಳ ಜನ್ಮ ದಿನಾಚರಣೆ, ಸಂಸ್ಥಾಪಕರ ಸ್ಮರಣೆ, ದತ್ತಿ ಉಪನ್ಯಾಸ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ಕ್ರಿಯಾಶೀಲವಾಗಿದೆ. ಕಸಾಪದಿಂದ ನಡೆಯುವ ಕೆಲಸಗಳಿಗೆ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಕಸಾಪ ಮಾರ್ಗದರ್ಶಿ ಕೆ.ವಿ.ಶಿವಮೂರ್ತಿ, ಹಿರಿಯ ಕ್ರೀಡಾಪಟು ಮಹದೇವ್, ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಕೋಳಗುಂದ ಸ್ವಭಾವ, ಕೋಶಾಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ರುದ್ರೇಶ್ ಬಾಬು, ಚಂದ್ರೇಗೌಡ, ಕಿರಣ್‌ಗೌಡ, ಡಿ.ಆರ್.ಸುಧಾ, ಗಂಗಾಧರಸ್ವಾಮಿ, ವಿಜಯ್ ಅಗಡಿ, ಗಂಗಮ್ಮ, ಕಾತ್ಯಾಯಿನಿ, ದಿವಾಕರ್ ಬಾಬು ಭಾಗವಹಿಸಿದ್ದರು.