ಹುಣಸೂರು: ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದ ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದು, ಸರ್ಕಾರ ಕೂಡಲೇ ಮುಷ್ಕರ ಅಂತ್ಯಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸಿದವು.
ಬುಧವಾರ ವಿವಿಧ ದಲಿತ ಸಂಘಟನೆಗಳು, ಸತ್ಯ ಎಂಎಎಸ್ ಫೌಂಡೇಷನ್ ಸಹಯೋಗದಲ್ಲಿ ಮುಷ್ಕರ ನಿರತರಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಗ್ರಾಮ ಆಡಳಿತಾಧಿಕಾರಿಗಳಿಗೆ ಒಂದು ಕಚೇರಿ ಕಟ್ಟಡ, ಕಚೇರಿಗೆ ಬೇಕಾದ ಸಾಮಗ್ರಿ, ಮೊಬೈಲ್ ಫೋನ್, ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್, ಸ್ಕಾೃನರ್ ಇಂತಹ ಕನಿಷ್ಠ ಸೌಲಭ್ಯ ಕಲ್ಪಿಸಬೇಕು. ಅವರ ಈ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಗ್ರಾಮ ಆಡಳಿತಾಧಿಕಾರಿಗಳು ಬೇರೆ ಇಲಾಖೆಯ ಸರ್ಕಾರಿ ಅಧಿಕಾರಿಗಳಿಗಿಂತ ಭಿನ್ನವಾಗಿದ್ದು, ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇದೀಗ ಆಡಳಿತಾಧಿಕಾರಿಗಳ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗ್ರಾಮಗಳಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷಗಳಾದಾಗ, ಯಾವುದೇ ರೀತಿಯ ತೊಂದರೆಗಳಾದಾಗ ಹಾಗೂ ಪ್ರಕೃತಿ ವಿಕೋಪಗಳು ನಡೆದಾಗ, ಸಾವು-ನೋವು, ಹಾನಿಗಳಾದಾಗ ಸ್ಥಳದಲ್ಲಿ ಕಂದಾಯ ಅಧಿಕಾರಿಗಳ ಜತೆ ಹಾಜರಿದ್ದು, ಆಡಳಿತಾಧಿಕಾರಿಗಳು ನೀಡುವ ವರದಿ ಆಧರಿಸಿ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರದ ಹಂಚಿಕೆಯಾಗುತ್ತದೆ. ವಿದ್ಯಾರ್ಥಿಗಳ ಮತ್ತು ಗ್ರಾಮೀಣಿಗರ ಜಾತಿ, ಆದಾಯ ಪ್ರಮಾಣ ಪತ್ರಗಳು, ಭೂಮಿಗೆ ಸಂಬಂಧಪಟ್ಟ ಇತರ ಯಾವುದೇ ದಾಖಲೆ, ಗ್ರಾಮ ಆಡಳಿತಾಧಿಕಾರಿಗಳ ವರದಿ ಪ್ರಕಾರವೇ ಮುಂದುವರಿಯುತ್ತದೆ. ಗ್ರಾಮಗಳಲ್ಲಿ ಯಾವುದೇ ಜಾತ್ರೆ, ಹಬ್ಬ ಹರಿದಿನಗಳ ಬಗ್ಗೆಯೂ ಸರ್ಕಾರಕ್ಕೆ ಗ್ರಾಮ ಆಡಳಿತಾಧಿಕಾರಿಗಳೇ ಮಾಹಿತಿ ನೀಡಬೇಕು. ಇಷ್ಟೆಲ್ಲ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಇವರ ಮುಷ್ಕರದಿಂದಾಗಿ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇವರ ಕನಿಷ್ಠ ಸೌಲಭ್ಯಗಳ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಗ್ರೇಡ್- 2 ತಹಸೀಲ್ದಾರ್ ನರಸಿಂಹಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿಯ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ಅಲೆಮಾರಿ ಸಂಘದ ಶಿವರಾಜು ಕೆಬ್ಬೆಕೊಪ್ಪಲು, ಪೌರಕಾರ್ಮಿಕ ಸಂಘದ ಮಾದು, ಮುಸ್ಲಿಂ ಮುಖಂಡ ಅಬ್ದುಲ್ ಮಲ್ಲಿಕ್, ಸುಮಿತ್ರಮ್ಮ ಇದ್ದರು.