ಹುಣಸೂರು ನಗರ ಬಸ್‌ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಸಂಚಾರ ಬಿರುಸಾಗಿತ್ತು. 
ಜಿಲ್ಲೆ

ಹುಣಸೂರಿನಲ್ಲಿ ಮುಷ್ಕರಕ್ಕೆ ಬೆಂಬಲ

ವಸಂತಕುಮಾರ್ ಬಿ

ಹುಣಸೂರು: ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಹುಣಸೂರಿನಲ್ಲೂ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಮುಷ್ಕರದ ಪರಿಣಾಮ ಬಸ್‌ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಓಡಾಟ ಚುರುಕಾಗಿತ್ತು.

ಮಂಗಳವಾರ ಬೆಳಗಿನಿಂದಲೇ ಸಾರಿಗೆ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಗ್ರಾಮಾಂತರ ಭಾಗಗಳಿಂದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ತೊಂದರೆಯುಂಟಾಗಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾದರು. ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಪಿಯ ಒಂದು ತುಕಡಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಭರಾಟೆ ಜೋರಾಗಿತ್ತು. ಮಧ್ಯಾಹ್ನ 12ರ ವೇಳೆ ಹುಣಸೂರು ಬಸ್‌ನಿಲ್ದಾಣದಿಂದ 200ಕ್ಕೂ ಹೆಚ್ಚು ಸಾರಿಗೆ ಬಸ್‌ಗಳ ಸೇವೆ ಸಿಗಬೇಕಿತ್ತು. ಆದರೆ ಮಂಗಳವಾರ ಈ ಸಂಖ್ಯೆ ಕೇವಲ 40ಕ್ಕೆ ಕುಸಿದಿತ್ತು. ಅಕ್ಕಪಕ್ಕದ ಗ್ರಾಮಗಳಿಗೆ ಒಂದೆರಡು ಬಸ್‌ಗಳು ತೆರಳಿದ್ದು ಬಿಟ್ಟರೆ ಹೊಸದಾಗಿ ಬಸ್‌ಗಳು ಸಂಚರಿಸಲೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಮೈಸೂರಿಗೆ 10 ರೂ.ಹೆಚ್ಚಳ: ಖಾಸಗಿ ಬಸ್‌ಗಳು ಮೈಸೂರಿಗೆ ಸಾರಿಗೆ ಬಸ್‌ನಲ್ಲಿದ್ದ ದರ ರೂ.59ರ ಬದಲಿಗೆ 70 ರೂ.ಗಳನ್ನು ವಸೂಲು ಮಾಡುತ್ತಿದ್ದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳು ತುಟಿ ಬಿಚ್ಚಲಿಲ್ಲ. ಹುಣಸೂರಿನಲ್ಲಿ 30ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿದ್ದು, ಹೊಸಪೇಟೆ, ಬೆಂಗಳೂರಿಗೂ ಬಸ್‌ಗಳನ್ನು ಕಳುಹಿಸಿದ್ದೇವೆ. ಇಂದು ಮುಂಜಾನೆಯಿಂದ ಗ್ರಾಮಾಂತರ ಭಾಗಗಳಿಂದ ನಗರಕ್ಕೆ ಬರುವ ವೇಳೆ ಶಾಲಾ ಮಕ್ಕಳನ್ನು ಉಚಿತವಾಗಿ ಹತ್ತಿಸಿಕೊಂಡು ಬಂದಿದ್ದೇವೆ ಖಾಸಗಿ ಬಸ್ ಮಾಲೀಕರೊಬ್ಬರು ಪತ್ರಿಕೆಗೆ ತಿಳಿಸಿದರು.