ಮಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನತೆ ಹೈರಾಣಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಖಾಲಿ ಜಾಗ ಗುರುತಿಸಲು ಪಾಲಿಕೆ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲು ಮುಂದಾಗಿದೆ.
ನಗರದ ಕಂಕನಾಡಿ, ಅಂಬೇಡ್ಕರ್ ವೃತ್ತ, ಫಳ್ನೀರ್, ಬಂಟ್ಸ್ ಹಾಸ್ಟೆಲ್, ಸ್ಟೇಟ್‌ಬ್ಯಾಂಕ್, ಪಿವಿಎಸ್, ಕುದ್ರೋಳಿ, ಬಂದರು, ಲಾಲ್‌ಬಾಗ್, ರಥಬೀದಿ ಮೊದಲಾದ ಕಡೆ ಪಾರ್ಕಿಂಗ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ತಾತ್ಕಾಲಿಕವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗಿದೆ.
ಟೋಯಿಂಗ್ ಕಿರಿಕ್: ರಸ್ತೆ ಬದಿ ವಾಹನ ನಿಲ್ಲಿಸಿ ಎರಡು ನಿಮಿಷದಲ್ಲಿ ಕೆಲಸ ಮುಗಿಸಿ ಬರುವಷ್ಟರಲ್ಲಿ ವಾಹನವನ್ನು ಟೋಯಿಂಗ್ ಮಾಡಲಾಗುತ್ತದೆ. ವಾಹನವನ್ನು ಎತ್ತಿಕೊಂಡು ಹೋದರೆ ಅದರ ಹಿಂದೆ ಪೊಲೀಸ್ ಠಾಣೆಗೆ ಹೋಗಿ ದುಬಾರಿ ದಂಡ ಕಟ್ಟಿ ಅದನ್ನು ಬಿಡಿಸಿಕೊಂಡು ಬರುವಾಗ ಅರ್ಧ ದಿನ ಮುಗಿದು ಹೋಗುತ್ತದೆ. ದಿನಕ್ಕೆ 500 ರೂ. ದುಡಿಯುವವನ ನಾಲ್ಕು ದಿನದ ವೇತನ ಒಂದು ಕ್ಷಣದ ತಪ್ಪಿಗೆ ದಂಡದ ರೂಪದಲ್ಲಿ ಕಟ್ಟುವ ಪರಿಸ್ಥಿತಿ ಇದೆ.
ರಥಬೀದಿಯಲ್ಲಿ ಪಾರ್ಕಿಂಗ್ ಮಹಡಿ: ರಥಬೀದಿ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಬಾಳಂಭಟ್ ಹಾಲ್ ಸಮೀಪ ಮೂರು ಮಹಡಿಗಳ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇದನ್ನು ಜಾರಿಗೊಳಿಸಲಾಗುವುದು. 60 ವಾಹನಗಳ ನಿಲುಗಡೆಗೆ ಇಲ್ಲಿ ಅವಕಾಶ ಸಿಗಲಿದೆ. ಆ ಬಳಿಕ ಇಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
50 ಕಟ್ಟಡಗಳಿಗೆ ನೋಟಿಸ್: ನಗರದ ಬಹುತೇಕ ವಾಣಿಜ್ಯ ಕಟ್ಟಡಗಳಲ್ಲಿ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಪರಿಣಾಮ ದೊಡ್ಡ ಮಟ್ಟದಲ್ಲಿ ಪಾರ್ಕಿಂಗ್ ಸಮಸ್ಯೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಈಗಾಗಲೇ ಅಂತಹ 50 ಕಟ್ಟಡಗಳನ್ನು ಗುರುತಿಸಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 15 ಕಟ್ಟಡಗಳು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಅತಿಕ್ರಮಣ ಜಾಗವನ್ನು ತೆರವು ಮಾಡಿ ಪಾರ್ಕಿಂಗ್‌ಗೆ ಕಲ್ಪಿಸಿವೆ. ನಿಯಮ ಉಲ್ಲಂಘನೆ ಮಾಡಿದ ಕಟ್ಟಡಗಳ ವಿರುದ್ಧ ಪಾಲಿಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ತಿಳಿಸಿದ್ದಾರೆ.
ಪೊಲೀಸ್-ಪಾಲಿಕೆ ಸಭೆ ಶೀಘ್ರ: ನಗರದ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ನಿವಾರಣೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳನ್ನೊಳಗೊಂಡ ಸಭೆ ಜ.25ರಂದು ನಿರ್ಧಾರವಾಗಿತ್ತು. ಆದರೆ ತುರ್ತು ಕಾರಣದಿಂದ ಮುಂದೂಡಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿದೆ. ಹಂಪ್ಸ್ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಕೆ, ಸೂಚನಾ ಫಲಕ ಅಳವಡಿಕೆ ಸೇರಿದಂತೆ ಪ್ರಮುಖ ಪ್ರಸ್ತಾವನೆಗಳಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.
ಮಂಗಳೂರು ನಗರದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಪಾರ್ಕಿಂಗ್ ಸ್ಥಳಗಳನ್ನು ಅತಿಕ್ರಮಣ ಮಾಡಿದವರು ಅವರಾಗಿಯೇ ತೆರವು ಮಾಡಲು ಅವಕಾಶ ನೀಡಲಾಗುತ್ತದೆ. ತೆಗೆಯದೇ ಇದ್ದಲ್ಲಿ ಪಾಲಿಕೆಯಿಂದಲೇ ತೆರವು ಕಾರ್ಯಾಚರಣೆ ನಡೆಸಲು ಸೂಚನೆ ನೀಡಲಾಗಿದೆ. ವೇದವ್ಯಾಸ ಕಾಮತ್, ಶಾಸಕರು