ಕಾರವಾರ: ಸೆ. 11ರಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದಿಂದ ಕರೆ ನೀಡಲಾಗಿರುವ ಬಂದ್ಗೆ ಉತ್ತರ ಕನ್ನಡ ಜಿಲ್ಲೆಯ ಆಟೋ ಚಾಲಕ, ಮಾಲೀಕರ ಸಂಘ, ಟೆಂಪೋ ಚಾಲಕ, ಮಾಲೀಕರ ಮತ್ತು ಟ್ಯಾಕ್ಸಿ ಚಾಲಕರ, ಮಾಲೀಕರ ಸಂಘದ ವತಿಯಿಂದ ಬೆಂಬಲ ನೀಡಲಾಗುವುದು ಎಂದು ಈ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ, ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೆಕರ್, ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಸಂಸ್ಥೆಗಳು ಮತ್ತು ಆಟೋರಿಕ್ಷಾ ಟೆಂಪೋ ಟ್ಯಾಕ್ಸಿ ನಂಬಿಕೊಂಡು ಜೀವನ ನಡೆಸುತ್ತಿರುವವರು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಬೇಡಿಕೆಯಂತೆ ಶಕ್ತಿ ಯೋಜನೆಯಿಂದ ಸಂಕಷ್ಟ ಎದುರಿಸುತ್ತಿರುವ ಚಾಲಕರಿಗೆ ಜೀವನ ನಿರ್ವಹಣೆಗೆ ಭತ್ಯೆಯಾಗಿ ಪ್ರತಿ ತಿಂಗಳು ರಾಜ್ಯ ಸರ್ಕಾರ 10 ಸಾವಿರ ರೂ. ವಿಶೇಷ ಪ್ಯಾಕೇಜ್ ಘೊಷಣೆ ಮಾಡಬೇಕು. ನಾವು ಕೇಳುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ. ನಮ್ಮ ಬದುಕಿನ ಮೇಲೆ ಬರೆ ಎಳೆದ ಸರ್ಕಾರವೇ ನಮ್ಮ ಕುಟುಂಬ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಂಕೋಲಾ- ಕಾರವಾರ ಟೆಂಪೋ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಕಿಶೋರ ನಾಯ್ಕ (ಬಾಳಣ್ಣ ) ಮತ್ತು ಟ್ಯಾಕ್ಸಿ ಚಾಲಕರ, ಮಾಲೀಕರ ಸಂಘದ ಅಧ್ಯಕ್ಷ ಸಂತೋಷ ನಾಯ್ಕ, ಹಾಗೂ ಅಸ್ನೋಟಿ, ಮಲ್ಲಾಪುರ ಮಾರ್ಗದ ಟೆಂಪೋ ಚಾಲಕರ, ಮಾಲೀಕರು ಬೆಂಬಲವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.