ಕೊಟ್ಟೂರು: ಹರಿಹರ ಮತ್ತು ಕೂಡಲ ಸಂಗಮ ಪಂಚಮಸಾಲಿ ಪೀಠದ ಉಭಯ ಜಗದ್ಗುರುಗಳು ರಾಜಕಾರಣದಿಂದ ದೂರವಿರಬೇಕು ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಉಪಾಧ್ಯಕ್ಷ ದೇವರಮನಿ ಶಿವಚರಣ ಹೇಳಿದರು.
ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಶನಿವಾರ ಮಾತನಾಡಿ, ಪಂಚಮಸಾಲಿ ಜಗದ್ಗುರುಗಳು ಸಮಾಜವನ್ನು ಒಗ್ಗೂಡಿಸುವ ಜತೆಗೆ ಏಳಿಗೆಗೆ ಶ್ರಮಿಸಲಿ. ರಾಜಕಾರಣಿಗಳನ್ನು ಬೆಂಬಲಿಸಿ ಹೇಳಿಕೆ ನೀಡುವುದು ಸಮಂಜಸವಲ್ಲ. ಈಗಿನ ಎರಡೂ ಪೀಠ ಸೇರಿ, ಐದು ಪಂಚಮಸಾಲಿ ಪೀಠಗಳನ್ನು ಸ್ಥಾಪಿಸುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ಸೂಕ್ತವಲ್ಲ. ಒಂದು ಪೀಠದಡಿ ಉಳಿದ ಮಠಗಳು ಶಾಖಾ ಮಠಗಳಾಗಿರಬೇಕು. ಇಲ್ಲದಿದ್ದರೆ ಸ್ವಾಮೀಜಿಗಳ ನಡುವೆ ಸಮಸ್ಯೆ ಉಂಟಾಗಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಸ್ವಾಮೀಜಿಗಳು ರಾಜಕಾರಣಿಗಳ ಪರ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದರೆ ಒಂದೊಂದು ಗುಂಪಿಗೆ ಒಬ್ಬರು ಸ್ವಾಮೀಜಿ ಎಂಬ ಅಭಿಪ್ರಾಯ ಜನರಲ್ಲಿ ಮೂಡುತ್ತದೆ. ಸಮಾಜವನ್ನು ಗೊಂದಲಕ್ಕೆ ಈಡುಮಾಡುತ್ತದೆ. ಅಭಿವೃದ್ಧಿಗೆ ಹಿನ್ನೆಡೆಯಾಗಿ ಸಂಘಟನೆ ಹಿಮ್ಮುಖವಾಗಲಿದೆ ಎಂದರು.