ಶಿರ್ವ: ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ತಾಯಿ-ತಂದೆ ಹಾಗೂ ಸಹೋದರ-ಸಹೋದರಿಯರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಂಯುಕ್ತ ಕುಟುಂಬ ವ್ಯವಸ್ಥೆಯಲ್ಲಿರುವ ಒಗ್ಗಟ್ಟು, ಪ್ರೀತಿ ಜೀವನಕ್ಕೆ ನಿಜವಾದ ಬೆಂಬಲವಾಗುತ್ತದೆ. ಯಾವ ಸಮಸ್ಯೆಯಾದರೂ ಮನಸ್ಸೇ ದೊಡ್ಡ ವೈದ್ಯ. ಅದು ಎಲ್ಲವನ್ನೂ ಗುಣಪಡಿಸಬಲ್ಲದು ಎಂದು ಯುವ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು.
ಜ್ಞಾನಚೇತನಾ ಎಜುಕೇಶನ್ ಟ್ರಸ್ಟ್, ಹಿಂದು ಪಿಯು ಕಾಲೇಜು ಆತಿಥ್ಯದಲ್ಲಿ ಬೆಳ್ಮಣ್ ಲಯನ್ಸ್ ಕ್ಲಬ್, ಲಯನ್ಸ್ ಬೆಳ್ಮಣ್ ಸೆಂಚುರಿ, ಬೆಳ್ಮಣ್ ಲಿಯೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಿಂದು ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಮನೋವಿಕಾಸ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಲಯನ್ ಜಿಲ್ಲಾ ದ್ವಿತೀಯ ಉಪ ಗವರ್ನರ್ ಹರಿಪ್ರಸಾದ್ ರೈ ಅವರನ್ನು ಸನ್ಮಾನಿಸಲಾಯಿತು. ಮಾಜಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗಡೆ, ಸುನೀತಾ ಬಾಲಚಂದ್ರ ಶೆಟ್ಟಿ, ವಿಶ್ವನಾಥ ಪಾಟ್ಕರ್, ಸದಾನಂದ ಶೆಟ್ಟಿಗಾರ್, ಗುರುಪ್ರಸಾದ್ ಶೆಟ್ಟಿ, ಕಾಲೇಜು ಅಕಾಡೆಮಿಕ್ ಡೀನ್ ಗುರುಪ್ರಸಾದ್ ಭಟ್, ಪ್ರಾಂಶುಪಾಲ ಸುಂದರ್ ಮೇರಾ, ಪೂರ್ವಿ ರಾವ್, ಮಾಯಾ ಚರಣ್ ರಾವ್, ಶೈಲಜಾ ಪಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು. ಬೆಳ್ಮಣ್ ಲಯನ್ಸ್ ಕ್ಲಬ್ ಅಧ್ಯಕ್ಷ ರಂಜಿತ್ ಕೆ.ಎಸ್.ಸ್ವಾಗತಿಸಿದರು. ಜ್ಞಾನಚೇತನಾ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ನಿಶಿತಾ ಕಾರ್ಯಕ್ರಮ ನಿರೂಪಿಸಿದರು.