ಬೆಳಗಾವಿ: ದಿನದ 24 ಗಂಟೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲಸ ಮಾಡಿದ್ದಾರೆ. ಅವರ ದೂರದೃಷ್ಟಿ ದೇಶದ ಚಿತ್ರಣವನ್ನೇ ಬದಲಾವಣೆ ಮಾಡಿದೆ. ಹಾಗಾಗಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನನ್ನನ್ನು ಗೆಲ್ಲಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮನವಿ ಮಾಡಿದರು.
ನಗರದ ಕೆಎಲ್ಇ ಡಾ. ಎಂ.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗುಜರಾತ ಮಾಡೆಲ್ ಮೂಲಕ ಮೋದಿ ಮನೆ ಮಾತಾಗಿದ್ದಾರೆ. ಅಂತಹ ವ್ಯಕ್ತಿ 2014ರಲ್ಲಿ ಪ್ರಧಾನಿ ಆದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಲೋಕಸಭಾ ಚುನಾವಣೆಗೆ ಬಹಳಷ್ಟು ಸ್ಥಾನಮಾನ ಇದೆ. ದೇಶದ ಭದ್ರತೆ, ದೇಶದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ ಎಂದರೆ ಲೋಕಸಭಾ ಚುನಾವಣೆ. ಮೋದಿ ಅವರು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ. ಹಿಂದಿನ ಯುಪಿಯ ಸರ್ಕಾರದಲ್ಲಿ 2ಜಿ ಹಗರಣ ಸೇರಿ ಅನೇಕ ಹಗರಣ ಬೆಳಕಿಗೆ ಬಂದವವು. ಲಕ್ಷಾಂತರ ಕೋಟಿಯ ಹಗರಣಗಳ ತನಿಖೆ ಇಂದು ನಡೆಯುತ್ತಿದೆ ಎಂದರು.
ಹಿಂದಿನ ಸರ್ಕಾರದಲ್ಲಿ 100 ರೂ. ಜನರಿಗೆ ಬಿಡುಗಡೆಯಾದರೆ, ಫಲಾನುಭವಿಗೆ ಕೇವಲ 15 ರೂ. ತಲುಪುತ್ತಿತ್ತು. ಆದರೆ, ಮೋದಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ, ಭ್ರಷ್ಟಾಚಾರ ಕೊನೆಗಾಣಿಸಿದರು. ಕೃಷಿ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂ. ನೇರವಾಗಿ ರೈತರ ಖಾತೆಗೆ ಬರುತ್ತಿದೆ. ಇದರಲ್ಲಿ ಒಂದೆ ಒಂದು ರೂ. ಸೋರಿಕೆ ಆಗುವುದಿಲ್ಲ. ಜನಧನ ಖಾತೆ ಮೂಲಕ ಬಡ ವ್ಯಕ್ತಿ ಉಚಿತವಾಗಿ ಖಾತೆ ತೆರೆಯಲು ಅವಕಾಶ ನೀಡಿದ್ದು ಮೋದಿಯವರು. ಹೀಗಾಗಿ ಮೇ 7ರಂದು ಕಮಲ ಚಿಹ್ನೆಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದರು.
ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ದೇಶದ ರಕ್ಷಣಾ ವಲಯದಲ್ಲಿ ಸದ್ಯದ ಉತ್ಪಾದನೆ ಶೇ.70 ಇದೆ. ಬುಲೆಟ್ ಪ್ರೂಫ್, ಲೈವ್ ಜಾಕೆಟ್‌ಗಳು ಕೂಡಾ ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಈ ಹಿಂದೆ ನಮ್ಮ ನಾಯಕರು ಸರಿ ಇರಲಿಲ್ಲ. ಅವರಿಗೆ ಆಮದು ಮಾಡಿಕೊಳ್ಳುವುದು ಅಷ್ಟೇ ಗೊತ್ತಿತ್ತು. ಈ ಹಿಂದೆ ಸೋರ್ಸ್ ಇದ್ದರೂ ಉತ್ಪಾದಿಸಲು ಆಗಿಲ್ಲ. ಕ್ರೋಡ್ ಆಯಿಲ್ ಶೇ. 100ರಷ್ಟು ಆಮದು ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಸಕ್ಕರೆ ಉತ್ಪಾದನೆ ಆರಂಭ ಆಗಿ 100 ವರ್ಷ ಆಗಿದೆ. ಮೋದಿ ಪ್ರಧಾನಿ ಆದ ಬಳಿಕ ಸಕ್ಕರೆ ಉದ್ಯಮದಲ್ಲಿ ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡಿದರು. ಎಥೆನಾಲ್ ಉತ್ಪಾದನೆಗೆ ಎಲ್ಲ ಸಕ್ಕರೆ ಕಾರ್ಖಾನೆಗೆ ಪರವಾನಗಿ ನೀಡಿದರು. ಪೆಟ್ರೋಲಿಯಂನಲ್ಲಿ ಎಥೆನಾಲ್ ಶೇ. 10ರಿಂದ ಶೇ.20 ಸೇರಿಸಬಹುದಾದ ಶಕ್ತಿ ನಮ್ಮಲ್ಲಿ ಬಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಪ್ರಾಚಾರ್ಯ ಎಸ್.ಎ. ಪಾಟೀಲ ಇತರರಿದ್ದರು.