ಜಿಲ್ಲೆ

ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ಪೂರೈಕೆ : ಸಚಿವ ಜಿ.ಆರ್.ಅನಿಲ್‌ಕುಮಾರ್ ಹೇಳಿಕೆ

ಸೌಮ್ಯ ಆರ್

ಕಾಸರಗೋಡು: ಗ್ರಾಮೀಣ ಪ್ರದೇಶಗಳು ಸೇರಿದಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲು ಕೆ-ಸ್ಟೋರ್ ಯೋಜನೆ ಸಕ್ರಿಯಗೊಳಿಸಲಾಗುವುದು ಎಂದು ಆಹಾರ, ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು ಮತ್ತು ಲೀಗಲ್ ಮೆಟ್ರಾಲಜಿ ಖಾತೆ ಸಚಿವ ಜಿ.ಆರ್.ಅನಿಲ್ ತಿಳಿಸಿದ್ದಾರೆ.

ಕಾಞಂಗಾಡ್‌ನ ಚೇಡಿ ರಸ್ತೆಯಲ್ಲಿ ಸಪ್ಲೈಕೊ ಮಾವೇಲಿ ಸೂಪರ್ ಸ್ಟೋರ್ ಉದ್ಘಾಟಿಸಿ ಮಾತನಾಡಿದರು.

ಕೆ-ಸ್ಟೋರ್ ಮೂಲಕ ಅಡುಗೆ ಅನಿಲ, ಮಿಲ್ಮಾ ಮತ್ತು ಶಬರಿ ಉತ್ಪನ್ನಗಳು ಲಭ್ಯವಾಗಲಿವೆ. ಪ್ರಸಕ್ತ ರಾಜ್ಯದ 390 ಪಡಿತರ ಅಂಗಡಿಗಳಲ್ಲಿ 38 ಅಂಗಡಿಗಳನ್ನು ಸ್ಮಾರ್ಟ್‌ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ ಅಂಗಡಿಗಳ ಸೇವೆಗಳನ್ನು ಹೆಚ್ಚಿನ ಪಡಿತರ ಅಂಗಡಿಗಳಿಗೆ ವಿಸ್ತರಿಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ ಎಂದರು.

ಶಾಸಕ ಇ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಪ್ರಥಮ ಮಾರಾಟ ನಡೆಸಿಕೊಟ್ಟರು. ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಕೆ.ವಿ.ಸರಸ್ವತಿ, ಕೆ.ಅನೀಸನ್, ವಿ.ಪ್ರಭಾವತಿ, ನಗರಸಭಾ ಸದಸ್ಯರಾದ ಎನ್.ವಿ.ರಾಜನ್, ಪಳ್ಳಿಕ್ಕೈ ರಾಧಾಕೃಷ್ಣನ್, ಪಿ.ವಿ.ಮೋಹನನ್, ಕೆ.ರವೀಂದ್ರನ್ ಮತ್ತಿತರರು ಉಪಸ್ಥಿತರಿದ್ದರು. ಸಪ್ಲೈಕೋ ಪ್ರಧಾನ ವ್ಯವಸ್ಥಾಪಕ ವಿ.ಕೆ.ಅಬ್ದುಲ್ ಖಾದರ್ ಸ್ವಾಗತಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ವಂದಿಸಿದರು.