ಕುಳಗೇರಿ ಕ್ರಾಸ್ ಸಮೀಪದ ನೀಲಗುಂದ ಗ್ರಾಮದ ಮುಖ್ಯರಸ್ತೆಯಲ್ಲಿ ಪೋಲಾಗುತ್ತಿರುವ ನೀರನ್ನು ತಹಸೀಲ್ದಾರ್ ಮಧುರಾಜ ಕೂಡಲಗಿ ವೀಕ್ಷಿಸಿದರು. ಉಪ ತಹಸೀಲ್ದಾರ್ ಎ್.ಎಂ. ಮೋಮಿನ, ಕಂದಾಯ ನಿರೀಕ್ಷಕ ಶ್ರೀದರ ವಿಶ್ವಕರ್ಮ ಇತರರಿದ್ದರು. 
ಜಿಲ್ಲೆ

ಶೀಘ್ರ ರೈತರ ಜಮೀನುಗಳಿಗೆ ನೀರು ಪೂರೈಸಿ

ಕುಳಗೇರಿ ಕ್ರಾಸ್: ಮಲಪ್ರಭಾ ಎಡದಂತೆ ಕಾಲುವೆಯ 42ರ ಹಂಚು ಕಾಲುವೆ ನೀರು ಪೋಲಾಗಿ ಮುಖ್ಯರಸ್ತೆಯಲ್ಲಿ ಸಂಚರಿಸಲು ತೊಂದರೆ ಆಗಿದೆ ಎಂಬ ರೈತರ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಬಾದಾಮಿ ತಹಸೀಲ್ದಾರ್ ಮಧುರಾಜ ಕೂಡಲಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿದ್ದ ನೀರಾವರಿ ಅಧಿಕಾರಿಗಳಿಗೆ ಕೂಡಲೇ ನೀರು ಪೋಲಾಗುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರರು ಸೂಚಿಸಿದರಲ್ಲದೆ, ಮುಚ್ಚಿದ ಕಾಲುವೆಯನ್ನು ಮರು ನಿರ್ಮಿಸಿ ರೈತರ ಜಮೀನುಗಳಿಗೆ ನೀರು ಪೊರೈಸುವಂತೆಯೂ ತಿಳಿಸಿದರು.

ಸದ್ಯ ಮುಖ್ಯ ಗೇಟ್ ಬಂದ್ ಮಾಡಿ ಪೋಲಾಗುತ್ತಿದ್ದ ನೀರನ್ನು ತಡೆಯಲಾಗಿದೆ. ರೈತರು ಬೆಳೆದ ಬೆಳೆಗಳು ಇರುವುದರಿಂದ ಮುಚ್ಚಿದ ಕಾಲುವೆ ತೆಗೆಯುವುದು ಕಷ್ಟವಾಗುತ್ತಿದೆ. ಬೆಳೆ ಕಟಾವು ನಂತರ ಕಾಲುವೆ ನಿರ್ಮಿಸಿ ನೀರು ಹರಿಸಲಾಗುವುದೆಂದು ಕಾಕನೂರ ಎಇಇ ಮಲ್ಲಿಕಾರ್ಜು ಡಂಬಳೆಕರ್ ತಿಳಿಸಿದರು.

ಉಪ ತಹಸೀಲ್ದಾರ್ ಎ್.ಎಂ. ಮೋಮಿನ, ಕಂದಾಯ ನಿರೀಕ್ಷಕ ಶ್ರೀದರ ವಿಶ್ವಕರ್ಮ, ನೀರಾವರಿ ಇಲಾಖೆಯ ತೋಟಪ್ಪ ಸೋರೆಬಾನ ಇತರರಿದ್ದರು.

ರೈತರ ಜಮೀನುಗಳಿಗೆ ಒದಗಿಸಬೇಕಾದ ನೀರು ಪೋಲಾಗಿ ಹಳ್ಳ ಸೇರುತ್ತಿದೆ. ನೀರಾವರಿ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಿಸಿದವರು ಪೋಲಾಗುವ ನೀರನ್ನು ತಡೆದು ರೈತರ ಜಮೀನುಗಳಿಗೆ ಒದಗಿಸಬೇಕು.
ಆರ್. ಆರ್. ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ, ನೀಲಗುಂದ.