ಮುಂಡರಗಿ: ರೈತರ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರು ಪೂರೈಸಬೇಕು ಎಂದು ಒತ್ತಾಯಿಸಿ ತಾಲೂಕು ಸಿಂಗಟಾಲೂರು ಏತನೀರಾವರಿ ಯೋಜನೆಯ ಹನಿ ನೀರಾವರಿ ಪ್ಯಾಕೇಜ್-1ರ ಹನಿ ನೀರಾವರಿಯ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿದರು.
ಸಿಂಗಟಾಲೂರು ಏತನೀರಾವರಿ ಯೋಜನೆಯಡಿ ಹನಿ ನೀರಾವರಿ ಯೋಜನೆಯ ಪ್ಯಾಕೇಜ್ 1ರಲ್ಲಿ ವಿವಿಧ ಗ್ರಾಮಗಳನ್ನು ಒಳಗೊಂಡು 10,080 ಹೇಕ್ಟೇರ್ ಜಮೀನು ಒಳಪಡುತ್ತದೆ. ಹನಿ ನೀರಾವರಿ ಮೂಲಕ ಜೂನ್ನಿಂದಲೇ ರೈತರ ಜಮೀನುಗಳಿಗೆ ನೀರು ಪೂರೈಸಬೇಕಿತ್ತು. ಆದರೆ, ಇಲ್ಲಿಯವರೆಗೆ ಸರ್ಕಾರಿ ನೀರಾವರಿ ಇಲಾಖೆ ಇಂಜಿನಿಯರ್ ಹಾಗೂ ಹನಿನೀರಾವರಿಯ ಮೇಘಾ ಕಂಪನಿ ಹಾಗೂ ನೆಟ್ಪೇಮ್ ಕಂಪನಿಯವರು ರೈತರ ಜಮೀನುಗಳಿಗೆ ನೀರು ಹರಿಸುತ್ತಿಲ್ಲ. ಕೇಳಿದರೆ ಒಬ್ಬರ ಮೇಲೆ ಮತ್ತೊಬ್ಬರು ನೆಪ ಹೇಳುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ನೀರು ಇಲ್ಲದೇ ನಾಶವಾದರೆ ಈ ಎಲ್ಲ ಜವಾಬ್ದಾರಿಯನ್ನು ಹನಿ ನೀರಾವರಿ ನಿರ್ವಹಣೆ ಕಂಪನಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಹೊತ್ತು ರೈತರಿಗೆ ಪರಿಹಾರ ಕೊಡಬೇಕಾಗುತ್ತದೆ. ರೈತರ ಜಮೀನುಗಳಿಗೆ ನೀರು ಬಿಡಬೇಕು. ಇಲ್ಲದಿದ್ದರೆ ನೀರು ಬಳಕೆದಾರರ ಸಂಘ ಹಾಗೂ ಎಲ್ಲ ರೈತರು ಸೇರಿ ಗದಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ರೈತರಾದ ರಮೇಶ ಹುಳಕಣ್ಣವರ, ನಿಂಗಪ್ಪ ಗಾಳಿ, ಹನುಮಪ್ಪ ಹೆಬ್ಬಾಳ, ಪರಮೇಶ ಗೋಣೆಣ್ಣವರ, ಸುರೇಶ ಹಡಪದ, ಗಣೇಶ ಭರಮಕ್ಕನವರ, ಸಿದ್ದಪ್ಪ ಹೊಂಬಳ, ಜೆ.ಎಚ್. ಸಣ್ಣಪ್ಯಾಟಿ, ಗವಿಸಿದ್ದಪ್ಪ ಬಂಡಿಹಾಳ, ರಾಜಶೇಖರ ಬಂಡಿಹಾಳ, ನಿಂಗಪ್ಪ ಕವಲೂರ, ಹನುಮಪ್ಪ ಚವಡಾಳ, ಎಸ್.ಎಸ್. ಹಾದಿಮನಿ, ಮಹಾದೇವಪ್ಪ ಹಂದಿಗನೂರ, ಶೇಖಪ್ಪ ಪವಾರ, ವೀರೇಶ ಅಂಗಡಿ, ಇತರರಿದ್ದರು.