ಶಿಗ್ಗಾಂವಿ: ರೈತರ ಪಂಪ್ಸೆಟ್ಗಳಿಗೆ ಈ ಮೊದಲಿನಂತೆ ನಿತ್ಯ ಹಗಲು 7 ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಬೇಕು. ಇದರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿ ರೈತರು, ಹೆಸ್ಕಾಂ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವಿದ್ಯುತ್ ಕೊರತೆ ನೆಪದಲ್ಲಿ ಹಗಲು ಪೂರೈಕೆ ಕಡಿಮೆಗೊಳಿಸಿ, ರಾತ್ರಿ ಸಮಯದಲ್ಲಿ ಪೂರೈಸಲು ಮುಂದಾದ ಹೆಸ್ಕಾಂ ಇಲಾಖೆ ನಿರ್ಧಾರ ಅವೈಜ್ಞಾನಿಕವಾಗಿದೆ. ಹಗಲು ವಿದ್ಯುತ್ ಪೂರೈಕೆಯಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ವಿಷ ಜಂತುಗಳ ಭಯ ರೈತರಲ್ಲಿ ಆವರಿಸಿದ್ದರಿಂದ ರಾತ್ರಿ ವೇಳೆ ಬೆಳೆಗೆ ನೀರುಣಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಅಧಿಕಾರಿಗಳು ಸರ್ಕಾರ, ಇಲಾಖೆ ಮೇಲಧಿಕಾರಿಗಳ ಆದೇಶ ಪಾಲಿಸುವ ಬದಲು ಸ್ಥಳೀಯ ರೈತರ ಹಿತ ಚಿಂತನೆಗೆ ಸ್ಪಂದಿಸಿ ಹಗಲು ಹೊತ್ತಿನಲ್ಲಿ 7 ತಾಸು ತ್ರೀ ಫೇಸ್ ವಿದ್ಯುತ್ ಪೂರೈಸಲು ಕ್ರಮಕೈಗೊಳ್ಳಬೇಕು. ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಹೆಸ್ಕಾಂ ಸಹಾಯಕ ಇಂಜಿನಿಯರ್ ತಾಂತ್ರಿಕ ವಿಭಾಗದ ಅಧಿಕಾರಿ ವಿನಿತಾ ಎಸ್., ಇಲಾಖೆ ಅಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಈಗ ರೈತರ ಬೇಡಿಕೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಶಂಭುಲಿಂಗಪ್ಪ ಯಲಿಗಾರ, ಮುತ್ತು ಗಂಜಿಗಟ್ಟಿ, ಅಶೋಕ ಹಾವಣಗಿ, ಸುನೀಲ ಕಾಳೆ, ಶಿವಯೋಗಪ್ಪ ನವಲಗುಂದ, ಮುದಕಪ್ಪ ಕಾಳೆ, ಗಂಗಾಧರ ಮುನೇನಕೊಪ್ಪ, ಪುಟ್ಟು ಹುಬ್ಬಳ್ಳಿ, ಸಮಜೀವ ಯಲಿಗಾರ, ಅನಿಲ ಯಲಿಗಾರ, ಇತರರಿದ್ದರು.