ಕನಕಪುರ: ಹೈನುಗಾರಿಕೆಯನ್ನೇ ಅವಲಂಬಿಸಿರುವ ಕೃಷಿಕರು ಗುಣಮಟ್ಟದ ಹಾಲು ಹಾಕುವ ಜತೆಗೆ ಆರ್ಥಿಕ ಅಭಿವೃದ್ಧಿ ಕಾಣಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ತಾಲೂಕಿನ ಶಿವನಹಳ್ಳಿ ಮೆಗಾಡೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃತತಾ ಹಾಗೂ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಉತ್ಪಾದಕ, ಗ್ರಾಹಕ ಹಾಗೂ ಒಕ್ಕೂಟದ ಸಿಬ್ಬಂದಿಗೆ ಅನುಕೂಲಕರ ವಾತಾವರಣ ನಿರ್ಮಿಸುವ ಗುರಿಹೊಂದಿದ್ದೇವೆ. ಹೈನುಗಾರಿಕೆ ಫಲಪ್ರದವಾದ ಉದ್ಯಮವಾಗಿದೆ. ಇಂತಹ ಒಕ್ಕೂಟವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಹಾಲು ಉತ್ಪಾದಕರು, ಅಧಿಕಾರಿಗಳು ಸಿಬ್ಬಂದಿ ಸಹಕಾರ ಅಗತ್ಯವಾಗಿದೆ ಎಂದರು.
ಒಕ್ಕೂಟದ ನಷ್ಟ ಸರಿದೂಗಿಸುವುದು ಮೊದಲ ಆದ್ಯತೆಯಾಗಿದೆ. ಕಾಲ್ ಸೆಂಟರ್ ಮೂಲಕ ರೈತರ ಗ್ರಾಹಕರ ದಿನನಿತ್ಯದ ಸಮಸ್ಯೆ ಬಗೆಹರಿಸಲು ಕ್ರಮ, 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನ, ಒಕ್ಕೂಟಕ್ಕೆ ಗುಣಮಟ್ಟದ ಹಾಲು ಉತ್ಪಾದಿಸುವ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಹೀಗೆ ಹಲವಾರು ಸುಧಾರಣೆ ಜತೆಗೆ ಹಾಲು ಒಕ್ಕೂಟವನ್ನು ಲಾಭದಾಯಕವಾಗಿ ಬೆಳೆಸುವ ಚಿಂತನೆ ಇದೆ ಎಂದರು.
ತಾಲೂಕಿನ ರೈತರು ಗುಣಮಟ್ಟದಿಂದ ಕೂಡಿದ 4 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದಲ್ಲಿ, ರೈತರಿಗೆ ಹೆಚ್ಚಿನ ದರ ನೀಡಲು ಅನುಕೂಲವಾಗಲಿದೆ ಎಂದ ಅವರು, ಬೆಂಗಳೂರು ಹಾಲು ಒಕ್ಕೂಟ ಲಾಭ ಗಳಿಸಬೇಕಾದರೆ ರೈತರು, ಗ್ರಾಹಕರ ಸಹಕಾರ ಅತ್ಯಗತ್ಯ. ನಂದಿನಿ ಉತ್ಪನ್ನಗಳನ್ನೇ ಜನ ಕೊಂಡುಕೊಳ್ಳುವ ರೀತಿ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಇದಕ್ಕೆ ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಗಳು ಸಹಕರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಂಕಷ್ಟ ಅರಿತಿರುವ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹಾಲು ಒಕ್ಕೂಟ ಲಾಭದಾಯಕವಾಗಿ ಮುನ್ನಡೆಯಲಿದೆ ಎಂದರು.
ಬೆಂಗಳೂರು ಡೇರಿ ಉಪಾಧ್ಯಕ್ಷ ರಾಜಣ್ಣ, ಆಡಳಿತ ಮಂಡಳಿಯ ನಾಗರಾಜು, ನಿರ್ದೇಶಕ ಎಚ್.ಎಸ್.ಹರೀಶ್ಕುಮಾರ್, ಮಾಜಿ ಅಧ್ಯಕ್ಷ ರಾಜ್ಕುಮಾರ್, ಲಿಂಗೇಶ್, ಭೈರೇಗೌಡ, ರಮೇಶ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ತಾಲೂಕು ಗ್ಯಾರಂಟಿ ಅಧ್ಯಕ್ಷ ಕೆ.ಎನ್.ದಿಲೀಪ್ ಬೆಂಗಳೂರು ಹಾಲು ಒಕ್ಕೂಟದ ಪದಾಧಿಕಾರಿಗಳು, ಆರ್ಇಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಮುಖಂಡರಾದ ಡಿ.ಎಂ.ವಿಶ್ವನಾಥ್, ಜಿಪಂ ಮಾಜಿ ಅಧ್ಯಕ್ಷ ಬಸಪ್ಪ, ನಟೇಶ್, ರಾಜಕುಮಾರ್ ಸೇರಿ ಚುನಾಯಿತ ಪ್ರತಿನಿಧಿಗಳು, ಮುಖಂಡರು ಇದ್ದರು.
ಹಾಲು ಒಕ್ಕೂಟದ ಅಧ್ಯಕ್ಷನಾಗಿ ಒಕ್ಕೂಟದಲ್ಲಿ ಬದಲಾವಣೆ ತರಲು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ದೃಷ್ಟಿ ಹೊಂದಲಾಗಿದೆ. ಒಕ್ಕೂಟದ ಗೌರವಧನ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯದೆ ಕರ್ತವ್ಯ ನಿರ್ವಹಿಸಲಾಗುವುದು. > ಡಿ.ಕೆ.ಸುರೇಶ್ ಅಧ್ಯಕ್ಷರು, ಬಮುಲ್