ಕಿಕ್ಕೇರಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಬಿಎಂಸಿ ಘಟಕಗಳ ಸ್ಥಾಪನೆಯಿಂದ ಹಾಲು ಕೆಡದಂತೆ ಗುಣಮಟ್ಟದ ಹಾಲು ಕಾಪಾಡಬಹುದಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಕೆ ಮಾಡಿದರೆ ಮಾತ್ರ ರೈತರಿಗೆ ಅಧಿಕ ಲಾಭ ದೊರೆಯಲಿದೆ. ಸಂಘದ ಹೆಸರೂ ಉಳಿಯಲಿದೆ. ನಿಮ್ಮೂರಿನ ಡೇರಿಯನ್ನು ಜೋಪಾನ ಮಾಡುವುದು ತಮ್ಮ ಕರ್ತವ್ಯ ಎಂದರು.
ಹಾಲು ಉತ್ಪಾದಕರಲ್ಲಿ ಒಬ್ಬರು ಮಾಡುವ ತಪ್ಪಿನಿಂದ ಇಡೀ ಡೈರಿಯ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು ಸಾಧ್ಯವಾಗುವುದಿಲ್ಲ. ಹಾಲು ಶೀತಲೀಕರಣ ಘಟಕವನ್ನು ಸದ್ಭಳಕೆ ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಕೃಷಿ ಚಟುವಟಿಕೆ ಒಂದರಿಂದಲೇ ರೈತರು ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಿಲ್ಲ. ಪೂರಕವಾಗಿ ಹೈನುಗಾರಿಕೆ, ಮೇಕೆ, ಕುರಿ ಸಾಕಣೆಯಂತಹ ಉಪ ಕಸುಬುಗಳನ್ನು ಅವಲಂಬಿಸಿದರೆ ಪ್ರಗತಿ ಕಾಣಬಹುದು. ತಮ್ಮ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಿ ಎಂದು ತಿಳಿ ಹೇಳಿದರು.
ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ ಆಯ್ಯವ್ಯಯ ಮಂಡಿಸಿದರು.
ಮನ್ಮುಲ್ ತಾಲೂಕು ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಸಂಘದ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಚಂದ್ರಪ್ಪ, ನಿರ್ದೇಶಕರಾದ ಜಿ.ಎಂ. ನಿಂಗಪ್ಪ, ಪ್ರಸಾದ್, ಆನಂದ್, ಕಿರಣ್‌ಕುಮಾರ್, ಶಿವಪ್ಪ, ಕುಮಾರ್, ಅಂಬುಜಾಕ್ಷಿ, ಪುಟ್ಟಮಣಿ, ನಟೇಶಾಚಾರಿ, ರಮೇಶ್, ಮಹೇಂದ್ರ, ಹಾಲು ಪರೀಕ್ಷಕ ವಿರೂಪಾಕ್ಷ, ಸಹಾಯಕರಾದ ಚನ್ನಪ್ಪ, ರುದ್ರೇಶ್ ಮತ್ತಿತರರಿದ್ದರು.