ಮದ್ದೂರು: ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.
ಪಟ್ಟಣದ ಹಾಲು ಉತ್ಪಾದಕರ ಉಪ ಕಚೇರಿಯಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ನೌಕರರ ಕಲ್ಯಾಣ ಟ್ರಸ್ಟ್ ವತಿಯಿಂದ ಬುಧವಾರ ಸದಸ್ಯ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಜಿಲ್ಲಾ ಹಾಲು ಒಕ್ಕೂಟ ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಟ್ಟಿಂಗ್ ಮಿಷನ್, ಹಾಲು ಕರೆಯುವ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಕೊಡಲಾಗುತ್ತಿದೆ ಹಾಗೂ ರಾಸುಗಳ ವಿಮೆಗೆ ಒಂದು ರಾಸುಗೆ ಇಂತಿಷ್ಟು ಎಂದು ಹಣ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ಒಕ್ಕೂಟಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.
ಪ್ರತಿಯೊಬ್ಬರೂ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಒಂದು ವೇಳೆ ರಾಸುಗಳು ಅಕಾಲಿಕ ಮರಣ ಹೊಂದಿದಾಗ ವಿಮೆ ಹಣ ಬರುತ್ತದೆ. ಇದರಿಂದ ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಒಳಾಗಬೇಕಾಗುತ್ತದೆ. ರಾಸುಗಳಿಗೆ ವಿಮೆ ಮಾಡಿಸುವ ಸಂಬಂಧ ಅಧಿಕಾರಿಗಳು ಹಾಲು ಉತ್ಪಾದಕರಿಗೆ ಅಗತ್ಯ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು ಮಾತನಾಡಿ, ಹೈನುಗಾರಿಕೆಯಿಂದ ಬಹುತೇಕ ರೈತರು ಜೀವನ ಕಟ್ಟಿಕೊಂಡಿದ್ದಾರೆ. ಇದನ್ನರಿತು ಸರ್ಕಾರ ಹಾಲು ಉತ್ಪಾದಕರಿಗೆ ಅಗತ್ಯ ಸಹಕಾರ ನೀಡುತ್ತಾ ಬಂದಿದೆ. ಏ.1ರಿಂದ ಒಂದು ಲೀಟರ್ ಹಾಲಿಗೆ 4 ರೂ. ಹೆಚ್ಚಿಸಿ, ಆ ಹಣವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡಲು ಮುಂದಾಗಿರುವ ಕ್ರಮ ಮೆಚ್ಚುಗೆಯ ವಿಷಯವಾಗಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟ, ಸಹಕಾರ ಸಂಘಗಳು ಜತೆಗೆ ಹಾಲು ಉತ್ಪಾದಕರು ಉಳಿಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಹಾಲು ಒಕ್ಕೂಟ ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 97 ಹಾಲು ಉತ್ಪಾದಕರಿಗೆ 43.30 ಲಕ್ಷ ರೂ. ಪರಿಹಾರ ಚೆಕ್‌ಗಳನ್ನು ವಿತರಣೆ ಮಾಡಲಾಯಿತು. ಹೊಸಗಾವಿ ಎಂಪಿಸಿಎಸ್ ಹಾಗೂ ಸಬ್ಬನಹಳ್ಳಿ ಬಿಎಂಸಿ ಕಟ್ಟಡಕ್ಕೆ 47.80 ಲಕ್ಷ ರೂ. ಚೆಕ್ ವಿತರಣೆ ಮಾಡಲಾಯಿತು.
ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಂಜೇಶ್‌ಗೌಡ, ಸಹಾಯಕ ವ್ಯವಸ್ಥಾಪಕರಾದ ಡಾ.ಜೀವನ್ ಗೋವಾರ್ಧನ್, ಹನುಮಂತ ತೋಳಮಠ. ವಿಸ್ತರಣಾಧಿಕಾರಿಗಳಾದ ಹರೀಶ್ ಹೆಗಡೆ, ಮಂಜುನಾಥ್, ರೂಮಾನ, ಭವ್ಯಶ್ರೀ, ಅಶ್ವಥ್, ರತ್ನಮ್ಮ ಇದ್ದರು.