ಗುಳೇದಗುಡ್ಡ: ಪಟ್ಟಣಕ್ಕೆ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಶುದ್ಧೀಕರಣ ಘಟಕದ ಫಿಲ್ಟ್‌ರ್ ಕೆಟ್ಟು ತಿಂಗಳುಗಳೇ ಆಗಿದ್ದು, ಇದರಿಂದ ಕುಡಿಯುವ ನೀರು ಶುದ್ಧೀಕರಣಗೊಳ್ಳದೆ ಪಟ್ಟಣಕ್ಕೆ ಸರಬರಾಜಾಗುತ್ತಿದೆ. ಇಂತಹ ನೀರನ್ನು ಕುಡಿಯುವುದರಿಂದ ವಾಂತಿಬೇಧಿ, ಹೊಟ್ಟೆನೋವು ಮುಂತಾದ ಕಾಯಿಲೆಗಳು ಬರುತ್ತಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ರವಿ ಅಂಗಡಿ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗ ಪೂರೈಕೆ ಆಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಕೂಡಲೇ ಪಟ್ಟಣದ ಪುರಸಭೆಯವರು ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಇಲ್ಲವಾದಲ್ಲಿ ಕರವೇ ವತಿಯಿಂದ ಸಾರ್ವಜನಿಕರೊಂದಿಗೆ ಉಗ್ರ ಪತ್ರಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಪಟ್ಟಣದಲ್ಲಿ ಕುಡಿಯುವ ನೀರು ಸಾಕಷ್ಟು ಪೋಲಾಗುತ್ತಿದೆಯಲ್ಲದೆ, ಜನರು ರಸ್ತೆಗೆ ಹರಿದುಬಿಡುತ್ತಿದ್ದಾರೆ. ಇದರಿಂದ ಮಲೀನ ನೀರಿನಲ್ಲೇ ಜನರು ಸಂಚರಿಸುತ್ತಿದ್ದಾರೆ. ರಸ್ತೆಗಳೂ ಹಾಳಾಗಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಗೊಂಡು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇನ್ನು ಹಂದಿ ಹಾಗೂ ಬೀಡಾಡಿ ದನಗಳು ಹಾವಳಿ ಹೆಚ್ಚಾಗಿವೆ. ಆದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಕರವೇದ ಶ್ರೀಕಾಂತ ಹುನಗುಂದ ನಿಂಗಪ್ಪ ಯಣ್ಣಿ, ಸೋಮಶೇಖರ ಕಲ್ಬುರ್ಗಿ, ವಿಜಯ ಕವಿಶೆಟ್ಟಿ, ಮಹಾಂತೇಶ ತಿಪ್ಪಾ, ಆನಂದ ತಿಪ್ಪಾಗೌಡ್ರ, ಮಲ್ಲಿಕಾರ್ಜುನ ಮೆಂತೆದ ಇದ್ದರು.