ಜಿಲ್ಲೆ

ಪಾಲಿಕೆಗೆ 66 ಆಟೋ ಟಿಪ್ಪರ್ ಪೂರೈಕೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇಲ್ಲಿಯವರೆಗೆ ಸ್ವಂತ ಖರ್ಚಿನಲ್ಲಿ ಆಟೋ ಟಿಪ್ಪರ್​ಗಳನ್ನು ಖರೀದಿಸುತ್ತಿತ್ತು. ಇದೀಗ ಹೊರ ಗುತ್ತಿಗೆ ವ್ಯವಸ್ಥೆಗೆ ಮೊರೆ ಹೋಗಿದೆ.

ಬೆಂಗಳೂರಿನ ಅಸೋಸಿಯೇಟೆಡ್ ಹ್ಯೂಮನ್ ರಿಸೋರ್ಸ್ ಸರ್ವಿಸಸ್ ಪ್ರೖೆವೇಟ್ ಲಿಮಿಟೆಡ್​ನವರು 66 ಆಟೋ ಟಿಪ್ಪರ್​ಗಳನ್ನು ಪೂರೈಸಿದ್ದು, ಅವುಗಳನ್ನು ಪಾಲಿಕೆಯ ಘನತ್ಯಾಜ್ಯ ವಸ್ತು ನಿರ್ವಹಣೆ (ಎಸ್​ಡಬ್ಲ್ಯುಎಂ) ವಿಭಾಗಕ್ಕೆ ಶುಕ್ರವಾರ ಸೇರ್ಪಡೆ ಮಾಡಿಕೊಳ್ಳಲಾಯಿತು.

ಪಾಲಿಕೆಯು ತಿಂಗಳಿಗೆ ಪ್ರತಿ ವಾಹನಕ್ಕೆ 70,500 ರೂ. ಮೊತ್ತವನ್ನು ಪೂರೈಕೆದಾರರಿಗೆ ನೀಡಲಿದೆ. ಚಾಲಕರ ವೇತನ, ಇಂಧನ ವೆಚ್ಚ, ದುರಸ್ತಿ ಮತ್ತು ನಿರ್ವಹಣೆ ಜವಾಬ್ದಾರಿ ಪೂರೈಕೆದಾರರದ್ದಾಗಿದೆ. ಪ್ರತಿ ವಾಹನ 3.5 ಕ್ಯೂಬಿಕ್ ಮೀಟರ್ ಸ್ಥಳಾವಕಾಶ ಹೊಂದಿದ್ದು, 1 ಟನ್ ಕಸ ಸಾಗಿಸುವ ಸಾಮರ್ಥ್ಯವುಳ್ಳದ್ದು.

‘ಈ ವಾಹನಗಳಿಗೆ ಪಾಲಿಕೆಯಿಂದ ಹೆಲ್ಪರ್ ಆಗಿ ಪೌರ ಕಾರ್ವಿುಕರನ್ನು ಕೊಡಲಾಗುವುದು. ಪ್ರತಿ ವಾಹನ ನಿತ್ಯ 30 ಕಿ.ಮೀ. ಸಂಚರಿಸಬೇಕು. ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲು ಜಿಪಿಎಸ್ ವ್ಯವಸ್ಥೆ ಇರಲಿದೆ. ಪಾಲಿಕೆ ಬಳಿ ಸ್ವಂತದ್ದಾದ 314 ಆಟೋ ಟಿಪ್ಪರ್​ಗಳಿವೆ. ಅವುಗಳಲ್ಲಿ ನಿತ್ಯ ಸುಮಾರು 25 ಆಟೋ ಟಿಪ್ಪರ್ ರಿಪೇರಿಗೆ ಹೋಗಿರುತ್ತವೆ. ಹೊರ ಗುತ್ತಿಗೆ ವ್ಯವಸ್ಥೆಯಡಿ ಆಟೋ ಟಿಪ್ಪರ್​ಗಳ ದುರಸ್ತಿ, ನಿರ್ವಹಣೆ, ಇಂಧನ ವೆಚ್ಚ, ಚಾಲಕರ ವೇತನ ಪೂರೈಕೆದಾರರದ್ದಾಗಿರುತ್ತದೆ. ಪಾಲಿಕೆಯದ್ದಾಗಿರುವುದಿಲ್ಲ’ ಎಂದು ಎಸ್​ಡಬ್ಲ್ಯುಎಂ ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ ಯರಂಗಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿನ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ ಮೇಯರ್ ಜ್ಯೋತಿ ಪಾಟೀಲ, ನಗರ ಸ್ವಚ್ಛತೆಗಾಗಿ ಪಾಲಿಕೆಯಿಂದ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮನೆ ಮನೆಯಿಂದ ಕಸ ಸಂಗ್ರಹಕ್ಕೆ 66 ಹೊಸ ಆಟೋ ಟಿಪ್ಪರ್​ಗಳನ್ನು ಹೊರಗುತ್ತಿಗೆ ವ್ಯವಸ್ಥೆಯಡಿ ಸೇರ್ಪಡೆ ಮಾಡಿಕೊಂಡಿದ್ದೇವೆ. ಅವಳಿ ನಗರವನ್ನು ಸ್ವಚ್ಛ, ಸುಂದರ ಹಾಗೂ ಮಾದರಿ ನಗರವನ್ನಾಗಿ ಪರಿವರ್ತಿಸಲು ಇದು ಮತ್ತೊಂದು ಹೆಜ್ಜೆಯಾಗಿದ್ದು, ನಾಗರಿಕರು ಸಹಕಾರ ಹಾಗೂ ಸಹಭಾಗಿತ್ವವನ್ನು ನೀಡಬೇಕು ಎಂದರು.

ಉಪ ಮೇಯರ್ ಸಂತೋಷ ಚವ್ಹಾಣ, ಸಭಾನಾಯಕ ಈರೇಶ ಅಂಚಟಗೇರಿ, ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯರಾದ ರಾಮಪ್ಪ ಬಡಿಗೇರ, ರೂಪಾ ಶೆಟ್ಟಿ, ಉಮಾ ಮುಕುಂದ, ಮಹದೇವಪ್ಪ ನರಗುಂದ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಇತರರು ಇದ್ದರು.