ವಿಜಯವಾಣಿ ಸುದ್ದಿಜಾಲ ಆನೇಕಲ್
ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸೋಲನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸಿನತ್ತ ಸಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಎಲ್.ವೈ.ರಾಜೇಶ್ ಹೇಳಿದರು.
10ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಚಂದಾಪುರದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಇತ್ತೀಚೆಗೆ ಚಂದಾಪುರ ರಾಜಲಾಂಛನ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪೂರಕ ಪರೀಕ್ಷೆ ತರಬೇತಿ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಪೂರಕ ಪರೀಕ್ಷೆಯಲ್ಲಿ ಶ್ರಮವಹಿಸಿ ಪರೀಕ್ಷೆ ಎದುರಿಸಿ ಶಿಕ್ಷಣ ಮುಂದುವರಿಸಬೇಕು ಎಂದರು.
ರಾಜಲಾಂಛನ ಸಂಸ್ಥೆಯ ಚಂದಾಪುರ ಘಟಕದ ವಸಂತ್ ಕುಮಾರ್ ಮಾತನಾಡಿ, ದೇವಾಲಯಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಶಿಕ್ಷಣಕ್ಕೆ ನೀಡಬೇಕು. ಪ್ರತಿ ಗ್ರಾಮದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮಕ್ಕಳನ್ನು ದೇವರೆಂದು ಭಾವಿಸಿ ಶಿಕ್ಷಣ ನೀಡಬೇಕು. ಮಕ್ಕಳು ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಗಮನವಿಟ್ಟು ಕೇಳಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಮುಂದಿನ ಜೀವನ ಉತ್ತಮವಾಗಿ ಕಟ್ಟಿಕೊಳ್ಳಬೇಕು ಎಂದರು.
ಮುಖಂಡರಾದ ನಾಗಲೇಖ, ಶೇಖರ್, ವಿಜಯರಾಘವರೆಡ್ಡಿ, ಲಿಂಗರಾಜು, ಬಸವರಾಜು, ಸುಭಾಷ್, ಮಹೇಶ್, ರಾಣಿ, ವಿದ್ಯಾ, ರಾಜಾರಾಮ್, ಶೀತಲ್, ಸಂತೋಷ್ ಪಾಟೀಲ್, ಸೆಂಟ್ ಫಿಲೋಮಿನಾ ಶಾಲೆಯ ಪ್ರಾಚಾರ್ಯ ರಾಜಗೋಪಾಲ್, ಸ್ವಾಮಿ ವಿವೇಕಾನಂದ ಶಾಲೆ ಮುಖ್ಯಶಿಕ್ಷಕ ಪುರುಷೋತ್ತಮ್, ಚಂದಾಪುರ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜೇಶ್ ಇದ್ದರು.