ಆನಂದ ಮತ್ತಿಗಟ್ಟಿ ಸವಣೂರ
ಕುಷ್ಠ ರೋಗ ನಿಮೂಲನೆಗಾಗಿ ರಾಜ್ಯ ಸರ್ಕಾರ ನಿರಂತರ ಜಾಗೃತಿ ಕಾರ್ಯಕ್ರಮ ನಡೆಸಿದ್ದರೂ ರೋಗಿಗಳಲ್ಲಿ ಬೇರೂರಿರುವ ಮೂಢನಂಬಿಕೆಯಿಂದಾಗಿ ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಇಲಾಖೆ ಅಧಿಕಾರಿಗಳ ಅಳಲು.
ರಾಜ್ಯದಲ್ಲಿ ಒಟ್ಟಾರೆ 1742 ಕುಷ್ಠ ರೋಗಿಗಳಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 192 ರೋಗಿಗಳು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಕಡಿಮೆ ಐವರು ರೋಗಿಗಳು ಇದ್ದಾರೆ.
ಬಿಬಿಎಂಪಿ, ಬೆಳಗಾವಿ, ಕೊಪ್ಪಳ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ 100ಕ್ಕಿಂತ ಹೆಚ್ಚು ರೋಗಿಗಳಿದ್ದು, ಜನರು ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ. ಇನ್ನು ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ರೋಗಿಗಳಿದ್ದು, ಈ ಭಾಗದಲ್ಲಿ ಕುಷ್ಠರೋಗ ಕೊಂಚ ನಿಯಂತ್ರಣದಲ್ಲಿರುವಂತೆ ಕಂಡುಬರುತ್ತಿದೆ.
ಮೈಕ್ರೋ ಬ್ಯಾಕ್ಟಿರಿಯಂ ಲೆಪ್ರೆ ರೋಗಾಣುವಿನಿಂದ ಹರಡುವ ಕುಷ್ಠರೋಗ, ಚರ್ಮ ಹಾಗೂ ನರ ರೋಗವಾಗಿದೆ. ತುರಿಕೆ ಇಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶವಿಲ್ಲದ ಮಚ್ಚೆಗಳು, ಕೈ, ಕಾಲು ಜೋಮು ಹಿಡಿಯುವುದು, ನರಗಳು ದಪ್ಪವಾಗುವುದು, ಕೈ ಕಾಲುಗಳಿಗೆ ಸ್ಪರ್ಶ ಜ್ಞಾನ ಇಲ್ಲದಂತಾಗುವುದು. ಮುಖ ಹಾಗೂ ಬೆನ್ನಿನ ಮೇಲಿನ ಚರ್ಮ ದಪ್ಪಾಗುವುದು. ಕಿವಿಯಾಲೆಗಳಲ್ಲಿ ಗಂಟು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆಗೆ ಮುಂದಾಗುವಂತೆ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಿದರೂ, ಮೂಢನಂಬಿಕೆಯಿಂದಾಗಿ ಜನರು ಚಿಕಿತ್ಸೆಯಿಂದ ದೂರ ಉಳಿಯುತ್ತಿರುವುದು ಪ್ರಕರಣ ಸಂಖ್ಯೆ ಹೆಚ್ಚಲು ಕಾರಣವಾಗಿದೆ.
ಪ್ರತಿ ರೋಗಿಗೆ ಸರ್ಕಾರದಿಂದ ಬೇವಿನ ಎಣ್ಣಿ, ಮುಲಾಮ್ ಕಾಟನ್ ಬಟ್ಟೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಪಡೆದ ರೋಗಿಗೆ ಎಂಸಿಆರ್ (ಮೈಕ್ರೋ ಸೇಲ್ಲಾರ್ ರಬ್ಬರ) ಚಪ್ಪಲಿ ನೀಡಲಾಗಿದೆ. ನಿರಂತರ ಚಿಕಿತ್ಸೆಯೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗೆ 12 ಸಾವಿರ ರೂ. ಸಹಾಯ ಧನ ನೀಡಲಾಗುತ್ತದೆ.
ಬಾಗಲಕೋಟಿ-25, ಬಿಬಿಎಂಪಿ- 192, ಬೆಳಗಾವಿ -173 , ಬಳ್ಳಾರಿ-106, ಬೀದರ-85, ವಿಜಯಪುರ-44, ಬೆಂಗಳೂರ (ಗ್ರಾ)- 19, ಬೆಂಗಳೂರ (ನ)- 40, ಚಾಮರಾಜನಗರ-50, ಚಿಕ್ಕಬಳ್ಳಾಪುರ -33, ಚಿಕ್ಕಮಗಳೂರ- 7, ಚಿತ್ರದುರ್ಗ-39, ದಕ್ಷಿಣ ಕನ್ನಡ-28, ದಾವಣಗೇರಿ-45, ಧಾರವಾಡ - 65, ಗದಗ-16, ಕಲಬುರಗಿ- 70, ಹಾಸನ-7, ಹಾವೇರಿ-76, ಕೊಡಗು-5, ಕೋಲಾರ-13, ಕೊಪ್ಪಳ-117 , ಮಂಡ್ಯ-18, ಮೈಸೂರು-61, ರಾಯಚೂರ-76, ರಾಮನಗರ - 15, ಶಿವಮೊಗ್ಗ-35, ತುಮಕೂರು-33, ಉಡುಪಿ-20, ಉತ್ತರ ಕನ್ನಡ- 71 ವಿಜಯನಗರ- 103, ಯಾದಗಿರಿ- 55.
ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸರ್ಕಾರ ಸೌಲಭ್ಯ ನೀಡಿದೆ. ಆದರೆ, ರೋಗ ಪತ್ತೆಗಾಗಿ ಸಮಯ ತೆಗೆದುಕೊಂಡ ಕಾರಣ ಜೀವನದಲ್ಲಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. | ಹೆಸರು ಹೇಳಲು ಇಚ್ಚಿಸದ ಸವಣೂರ ತಾಲೂಕಿನ ಕುಷ್ಠರೋಗಿ