ಹೊಳೆನರಸೀಪುರ: ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಶ್ರೀನಿವಾಸಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ಬುಧವಾರ ತಾತ್ಕಾಲಿಕವಾಗಿ ಸ್ಥಳಾಂತರಿಸಿದ ಗ್ರಾಮಾಂತರ ಠಾಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಿದ್ದು, ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 2018 ಐಪಿಸಿಯಡಿಯಲ್ಲಿ 6 ಸಾವಿರ, 2019ರಲ್ಲಿ ಸುಮಾರು 5.5 ಸಾವಿರ ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಕಳ್ಳತನ, ಆಸ್ತಿ ವಿವಾದಗಳ ತಡೆಗಟ್ಟುವಿಕೆಯಲ್ಲಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರ ಹೆಲ್ಮಟ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದಾಗ ಇಲಾಖೆಯನ್ನು ದೂಷಿಸುತ್ತಾರೆ. ಸಾರ್ವಜನಿಕರು ಅಪಘಾತ ಪ್ರಕರಣಗಳು ಹೆಚ್ಚಲು ಕಾರಣವೇನು ಎಂದು ಚಿಂತಿಸಿದಾಗ ಸಮಸ್ಯೆಯ ಅರಿವಾಗುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ನಾವು ಮೊದಲು ಬದಲಾಗಬೇಕು. ಅವರಲ್ಲಿ ಕ್ರೈಂ ಅಥವಾ ಅಪಘಾತ ತಡೆಗಟ್ಟಲು ಉತ್ಸುಕತೆ ತೊರಬೇಕು ಹಾಗೂ ಪೊಲೀಸರೊಂದಿಗೆ ಕೈಜೊಡಿಸಿದಾಗ ಕ್ರೈಂ ತಡೆಗಟ್ಟಲು ಸಾಧ್ಯ ಎಂದರು.
ಡಿವೈಎಸ್ಪಿ ಲಕ್ಷ್ಮೇಗೌಡ, ವೃತ್ತ ನಿರೀಕ್ಷಕ ಅಶೋಕ್, ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ್, ಪಿಎಸ್ಸೈಗಳಾದ ಕುಮಾರ್, ಮೋಹನಕೃಷ್ಣ, ರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಬಸವರಾಜು, ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರೆಹಮಾನ್ ಇತರರಿದ್ದರು.