ಜಿಲ್ಲೆ

ಭರ್ತಿ ಹಂತಕ್ಕೆ ಸೂಪಾ ಜಲಾಶಯ

Uttara Kannada - Subash Hegde

ಕಾರವಾರ: ಕಾಳಿ ಜಲ ವಿದ್ಯುತ್ ಯೋಜನೆಯ ಮೊದಲ ಅಣೆಕಟ್ಟೆ ಸೂಪಾ ಭರ್ತಿಯಾಗುವ ಹಂತ ತಲುಪಿದ್ದು, ಗೇಟ್‌ಗಳನ್ನು ತೆರೆದು ನೀರು ಹೊರಬಿಡುವ ಮುನ್ನೆಚ್ಚರಿಕೆಯನ್ನು ಕರ್ನಾಟಕ ವಿದ್ಯುತ್ ನಿಗಮವು ನೀಡಿದೆ.
ಜಲಾಶಯದ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯವು ಸಮುದ್ರ ಮಟ್ಟದಿಂದ 564 ಮೀಟರ್‌ಗಳಾಗಿವೆ. ಒಟ್ಟು 147.55 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಸೋಮವಾರ ಬೆಳಗಿನ ವರದಿಯಂತೆ ಅಣೆಕಟ್ಟೆಯ ನೀರಿನ ಮಟ್ಟವು 551.60 (ಶೇ.67.22) ಮೀಟರ್‌ಗೆ ಏರಿಕೆಯಾಗಿದೆ. ಎಂದರೆ 99.175 ಟಿಎಂಸಿ ನೀರು ಸಂಗ್ರಹವಾಗಿದೆ. 25,997 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯ ಮಟ್ಟ ನಿರಂತರವಾಗಿ ಏರುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಗೇಟ್‌ಗಳನ್ನು ತೆರೆದು ನೀರು ಹೊರಬಿಡುವ ಸಾಧ್ಯತೆ ಇದೆ.
ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ. ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆAದು ತಿಳಿಸಲಾಗಿದೆ ಹಾಗೂ ಸೂಪಾ ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸದಂತೆ ಎಚ್ಚರಿಸಲಾಗಿದೆ.