ವಿಜಯವಾಣಿ ಸುದ್ದಿಜಾಲ ಸುಂಟಿಕೊಪ್ಪ
ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ೧೦ನೇ ವಾರ್ಷಿಕೋತ್ಸವ ಗುರುವಾರ ಸಂಸ್ಥೆ ಆವರಣದಲ್ಲಿ ನಡೆಯಿತು. ವಿಶೇಷ ಚೇತನ ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಹಲವು ವೈವಿಧ್ಯಮಯ ಕಲಾಪದರ್ಶನ ಪ್ರೇಕ್ಷಕರ ಮನ ರಂಜಿಸಿತು.
ಸ್ವಸ್ಥ ಕೇಂದ್ರ ಸಹಸ್ರಾರಾರು ವಿಶೇಷಚೇತನ ಮಕ್ಕಳಿಗೆ ಆಸರೆಯಾಗಿದೆ. ಟಾಟಾ ಸಂಸ್ಥೆ ಪ್ರಮುಖರಾಗಿದ್ದ ದರ್ಬಾರಿ ಸೇಥ್ ಕೊಡಗಿಗೆ ಬಂದ ಸಂದರ್ಭ ನೀಡಿದ್ದ ೫ ಕೋಟಿ ರೂಪಾಯಿ ಅನುದಾನದಲ್ಲಿ ಕೂರ್ಗ್ ಫೌಂಡೇಶನ್ ಸ್ಥಾಪಿಸಲಾಯಿತು. ಈ ಫೌಂಡೇಶನ್ ಮೂಲಕ ಸ್ವಸ್ಥ ಪ್ರಾರಂಭಿಸಲಾಯಿತ್ತೆಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೂರ್ಗ್ ಫೌಂಡೇಶನ್ ಟ್ರಸ್ಟಿ ಎ.ಎಸ್. ಮುತ್ತಣ್ಣ
ಹೇಳಿದರು.
ದರ್ಬಾರಿ ಸೇಥ್ ಪರಿಕಲ್ಪನೆಯಲ್ಲಿ ಮುನ್ನಾರ್, ಮಲ್ಪಾರೆ ಹಾಗೂ ಸುಂಟಿಕೊಪ್ಪದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಕೇಂದ್ರ ಸ್ಥಾಪಿಸ ಲಾಗಿದೆ. ಟಾಟಾ ಸಂಸ್ಥೆ ಪ್ರಮುಖರಾಗಿದ್ದ ಆರ್.ಕೆ. ಕೃಷ್ಣಕುಮಾರ್ ಕೂಡ ಕೇಂದ್ರದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆಂದು ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪಕ ನಿರ್ದೇಶಕಿ ಕಾಕಮಾಡ ಗಂಗಾ ಚಂಗಪ್ಪ ಹೇಳಿದರು.
ಕೋವಿಡ್ ಸಂದರ್ಭ ಸ್ವಸ್ಥ ಮಕ್ಕಳು ೩೫ ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಸಿರುವುದಾಗಿ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ತೇಲಪಂಡ ಆರತಿ ಸೋಮಯ್ಯ ಹೇಳಿದರು. ಮೂರು ವರ್ಷ ಹಿಂದೆ ಕಲಾ ತರಬೇತುದಾರ ರಾಮ್ ಗೌತಮ್ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಕಲಾವಿಭಾಗದಲ್ಲಿ ತಯಾರಿಸಲ್ಪಟ್ಟ ವೈವಿಧ್ಯಮಯ ಕಲಾ ಉತ್ಪನ್ನಗಳು ದೇಶದಲ್ಲಿ ಅತ್ಯಧಿಕ ಬೇಡಿಕೆ ಗಳಿಸಿದೆ ಎಂದರು.
ವೇದಿಕೆಯಲ್ಲಿ ಟಾಟಾ ಸಂಸ್ಥೆ ಪ್ರಮುಖರಾದ ಎಂ.ಬಿ. ಗಣಪತಿ, ಕೆ.ಜಿ. ರಾಜೀವ್ ಇದ್ದರು. ವನಿತಾ ನಂಜಪ್ಪ ನಿರೂಪಿಸಿದರು. ಪ್ರೇಮಲತಾ ವಂದಿಸಿದರು.