ಜಿಲ್ಲೆ

ಮಂಜಿಕೇರೆ ಸಮುದಾಯ ಭವನದಲ್ಲಿ ಅಜ್ಜಿಯ ಕೈ ತುತ್ತು

ಎ. ಆರ್. ರಘುರಾಮ

ಸುಂಟಿಕೊಪ್ಪ : ಮಕ್ಕಳು ಮತ್ತು ಹಿರಿಯರ ನಡುವಿನ ಒಡನಾಟ, ಸಂವಾದ, ವಿಚಾರವಿನಿಮಯ,ವಾತ್ಸಲ್ಯ ಬಿಂಬಿಸುವ ಸಂದರ್ಭಗಳು ಕಡಿಮೆ ಆಗುತ್ತಿವೆ ಎಂದು ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ಹೇಳಿದರು.

ಮಂಜಿಕೇರೆ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಲಕಾವೇರಿ ಜ್ಞಾನ ವಿಕಾಸ ಕೇಂದ್ರ ಹಾಗೂ ಭೂಮಿಕ ಸ್ವಸಹಾಯ ಸಂಘ ಸಂಯುಕ್ತಾಶ್ರಯದಲ್ಲಿ ಪುಟ್ಟ ಮಕ್ಕಳಿಗೆ ಭಾನುವಾರ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮ ‘ಅಜ್ಜಿಯ ಕೈ ತುತ್ತು’ ಮತ್ತು ಕಾನ್‌ಬೈಲ್ ವಿಭಾಗದ ಸ್ವ ಸಹಾಯ ಸಂಘದ ಪದಾಧಿಕಾರಿಗಳಿಗೆ ನಡೆಸಿದ ಸ್ವ ಉದ್ಯೋಗ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ಬದಲಾದ ಜೀವನ ಕ್ರಮದಿಂದ ಮಕ್ಕಳು ಮತ್ತು ಅಜ್ಜ-ಅಜ್ಜಿ ನಡುವಿನ ಪ್ರೀತಿಯ ಕ್ಷಣಗಳು ಮಾಯವಾಗುತ್ತಿವೆ. ಹಿರಿಯರಿಗೆ ಯಾವ ರೀತಿ ಗೌರವ ತೋರಬೇಕು ಎಂದು ಮಕ್ಕಳಿಗೂ ತಿಳಿಯದಾಗಿದೆ. ಮಕ್ಕಳ ಮೇಲೆ ಹಿರಿಯರು ವಾತ್ಸಲ್ಯ ಧಾರೆ ಎರೆಯುವ ಸಂದರ್ಭಗಳೂ ದೂರವಾಗುತ್ತಿವೆ. ಇಂಥ ಸಂದರ್ಭ ಮಕ್ಕಳು- ಹಿರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಕೈ ತುತ್ತು ಕಾರ್ಯಕ್ರಮ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಉತ್ತಮವಾದ ಶಿಕ್ಷಣ, ಬದುಕಿಗೆ ಭದ್ರತೆ ನೀಡುವ ಉದ್ಯೋಗ- ಎರಡೂ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ. ಇಂದಿನ ದಿನಗಳಲ್ಲಿ ಸ್ವ ಉದ್ಯೋಗವನ್ನು ಮಾಡುವ ಸಾಮರ್ಥ್ಯಗಳನ್ನೂ ರೂಢಿಸಿಕೊಂಡರೆಇತರರ ಜೀವನಕ್ಕೂ ನೆರವಾಗುವ ನಾಯಕತ್ವ ದೊರಕುತ್ತದೆ. ಈ ನಿಟ್ಟಿನಲ್ಲಿ ಯುವ ಜನರು ಚಿಂತನೆ ಹರಿಸಬೇಕು. ಕಾರ್ಯಪ್ರವೃತ್ತರಾಗಬೇಕು ಎಂದು ಮಾಲಿನಿ ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಭೂಮಿಕಾ ತಂಡದ ಪೂವಮ್ಮ ವಹಿಸಿದ್ದರು. ಗ್ರಾಮದ ಹಿರಿಯರು ಮಕ್ಕಳಿಗೆ ಕೈ ತುತ್ತು ನೀಡಿ ಗಮನ ಸೆಳೆದರು. ಕಾನ್‌ಬೈಲ್ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಾದ ಜನನಿ, ಭೂಮಿಕಾ, ಕನ್ನಿಕಾ, ಭಗವತಿ ಹಾಗೂ ಧೃತಿ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿ ಯಶೋದಾ ಬಸವರಾಜ್, ಅಜಿರಾ, ಶೋಭಾ ಇತರರು ಇದ್ದರು.