ಜಿಲ್ಲೆ

ಗ್ರಾಮಾಂತರ ಜಿಲ್ಲೆಯಲ್ಲಿ ಬಿಸಿಲ ಧಗೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲ ಧಗೆ ಕಾಣಿಸಿಕೊಂಡಿದೆ, ಕಳೆದ ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಬಿಸಿಲಾಘಾತ ತಟ್ಟಲಿದೆ, ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 42 ಡಿ.ಸೆ. ಉಷ್ಣಾಂಶ ದಾಟುವ ನಿರೀಕ್ಷೆ ಇದ್ದು ಜಿಲ್ಲೆಯಲ್ಲಿಯೂ 36ರಿಂದ 38ಡಿ.ಸೆ. ದಾಟಿ ಬಿಸಿಲ ತಾಪ ನೆತ್ತಿಸುಡಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಾಖಲಾದ ಅತ್ಯಧಿಕ ತಾಪಮಾನ ಸುಮಾರು 37.6 ಡಿಗ್ರಿ ಸೆಲ್ಸಿಯಸ್ ಆಗಿದೆ, ಇದು ಕಳೆದ ಎಂಟು ವರ್ಷಗಳಲ್ಲಿ ದಾಖಲಾದ ಅತ್ಯಧಿಕ ತಾಪಮಾನ ಎನ್ನಲಾಗಿದೆ. ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ಈಗಾಗಲೇ ಬೆಂಗಳೂರಿನಲ್ಲಿ ವಾಡಿಕೆಗಿಂತ 5-6 ಡಿ.ಸೆ.ಅಧಿಕ ಉಷ್ಣಾಂಶ ವರದಿಯಾಗಲಿದೆ. ರಾಜಧಾನಿ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಭೂಮಿ ಕ್ಷೀಣಿಸುತ್ತಿರುವುದು, ಕೈಗಾರಿಕಾ ವಲಯ ವಿಸ್ತರಣೆ ಮತ್ತಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಮಾ.1ಕ್ಕೆ ಬೇಸಿಗೆಗಾಲ ಆರಂಭವಾಗಿ ಮೇ 31ರವರೆಗೆ ಇರುತ್ತದೆ. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ವಾಡಿಕೆಗಿಂತ ಮುನ್ನ ೆಬ್ರವರಿ 3ನೇ ವಾರದಲ್ಲಿಯೇ ಬೇಸಿಗೆ ತಾಪಮಾನದ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಕೂಲರ್‌ಗಳತ್ತ ಜನರ ಚಿತ್ತ: ಬೇಸಿಗೆ ಆರಂಭದಲ್ಲಿ ಮನೆ, ಕಚೇರಿಗಳಲ್ಲಿನ ್ಯಾನ್‌ಗಳನ್ನು ಅವಲಂಬಿಸುವುದು ಸಾಮಾನ್ಯ, ಮಾಚ್ ಬಳಿಕ ತೀವ್ರತರನಾದ ತಾಪಮಾನ ಹೆಚ್ಚುವುದರಿಂದ ಏರ್‌ಕಂಡೀಷನ್, ಏರ್‌ಕೂಲರ್‌ನಂತ ವಸ್ತುಗಳಿಗೆ ಜನ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಡುವ ವಿದ್ಯುತ್ ಕಡಿತ ಈಬಾರಿ ಗ್ರಾಮೀಣ ಜನರನ್ನು ಹೈರಾಣಾಗಿಸುವ ಆತಂಕ ಎದುರಾಗಲಿದೆ.

ಬಿಸಿ ಗಾಳಿ ಆತಂಕ: ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಆದರೆ, ೆಬ್ರವರಿಯಲ್ಲೇ ಬಿಸಿಲ ಧಗೆ ಕಾಣಿಸಿಕೊಂಡಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಳದಿಂದಾಗಿ ಬೆಳಗ್ಗೆ 8 ಗಂಟೆಯೊಷ್ಟಿತ್ತಿಗೇ ಸೂರ್ಯ ಪ್ರಕರನಾಗುತ್ತಿದ್ದು ನೆತ್ತಿ ಸುಡಲಾರಂಭಿಸಿದೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಈ ಬಾರಿಯೂ ಅಂಥದ್ದೇ ವಾತಾವರಣ ಇರುವ ಜತೆಗೆ ಬಿಸಿಗಾಳಿ ಬೀಸುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಅಂದಾಜಿಸಿದೆ.

ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾದರೆ ಜನರಿಗೆ ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ, ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆ ಕಾಡಲಿವೆ. ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ಬೀಳುವ ಅಪಾಯ ಇರುತ್ತದೆ ಜನರು ಎಚ್ಚರವಹಿಸುವುದು ಅಗತ್ಯ.

ಆರ್.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

ತಾಪಮಾನ ಹೆಚ್ಚಳಕ್ಕೆ ಕಾರಣವೇನು?

* ಕೃಷಿ ಭೂಮಿ ಕ್ಷೀಣಿಸುತ್ತಿರುವುದು

* ಕೈಗಾರಿಕಾ ವಲಯ ವಿಸ್ತರಣೆಯಾಗುತ್ತಿರುವುದು

* ಬಯಲು ಸೀಮೆಯಾಗಿರುವುದು

* ಮಣ್ಣಿನಲ್ಲಿ ತೇವಾಂಶ ಕೊರತೆ

* ಕೆರೆ, ಗುಂಟೆಗಳಲ್ಲಿ ನೀರು ಬರಿದಾಗುವುದು

* ತೇವಾಂಶಭರಿತ ಮೋಡ ಇಲ್ಲದಿರುವುದು

* ಅರಣ್ಯ ನಾಶ

ಮುಂಜಾಗ್ರತಾ ಕ್ರಮಗಳೇನು?

*ಹೆಚ್ಚು ನೀರು (ಕುದಿಸಿ ಆರಿಸಿದ) ಕುಡಿಯಬೇಕು

* ಗಂಜಿ, ಮಜ್ಜಿಗೆ, ಎಳನೀರು, ನಿಂಬೆ ರಸದಂತಹ ತಂಪು ಪಾನೀಯ ಸೇವನೆ ಉತ್ತಮ

* ತಾಜಾ ಹಣ್ಣು, ತರಕಾರಿ ಬಳಸಿ

* ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವನೆ

* ಮಾಂಸ, ಮಸಾಲೆ ಪದಾರ್ಥಗಳ ಮಿತ ಬಳಕೆ

* ಹೊರಗಿನ ಆಹಾರ ಮತ್ತು ಪಾನೀಯಗಳಿಂದ ದೂರವಿರುವುದು

* ಸುಡು ಬಿಸಿಲಿನಲ್ಲಿ ಓಡಾಡಬಾರದು

* ಹೊರಗೆ ಹೋದಲ್ಲಿ ಛತ್ರಿ, ಕೂಲಿಂಗ್ ಗ್ಲಾಸ್, ಹ್ಯಾಟ್ ಧರಿಸುವುದು

* ಚರ್ಮದ ರಕ್ಷಣೆಗೆ ಹತ್ತಿ ಉಡುಪು, ಸನ್‌ಸ್ಕ್ರೀನ್ ಲೋಷನ್ ಬಳಕೆ