ಜಿಲ್ಲೆ

ಮ್ಯೂಸಿಯಂ ಸೇರಿದ ಮಿಗ್-21 ವಿಮಾನ

ಮಡಿಕೇರಿ: ಆಧುನಿಕ ಯುಗದ ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸ, ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಮತ್ತೊಂದು ಆಕರ್ಷಣೆಯಾಗಿ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರ ಪ್ರಯತ್ನ ಫಲವಾಗಿ ಮಿಗ್-21 ವಿಮಾನ ಶುಕ್ರವಾರ ರಾತ್ರಿ ಮ್ಯೂಸಿಯಂ ಸೇರಿದೆ.
ಸದ್ಯ ಮಡಿಕೇರಿಗೆ ತರಲಾಗಿರುವ ಮಿಗ್ 21ಯುದ್ಧ ವಿಮಾನ 1971ನೇ ಯುದ್ಧದಲ್ಲಿ ದೊಡ್ಡಪಾತ್ರ ವಹಿಸಿದೆ. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಆಗಿನ ಸಮಯದಲ್ಲಿ 40-45 ಲಕ್ಷ ರೂ.ಬೆಲೆಯನ್ನು ಈ ವಿಮಾನ ಹೊಂದಿತ್ತು. ನಗರದಲ್ಲಿ ತಿಮ್ಮಯ್ಯ ಮ್ಯೂಸಿಯಂ ಕೆಲಸಗಳು ನಡೆಯುತ್ತಿದ್ದು, ನಂದಾ ಕಾರ್ಯಪ್ಪ ಅವರು ವಿಮಾನಕ್ಕಾಗಿ ಹಲವು ಬಾರಿ ಸೇನೆಗೆ ಮನವಿ ಸಲ್ಲಿಸಿದ್ದರು. ಇವರ ಪ್ರಯತ್ನದ ಫಲವಾಗಿ ಶುಕ್ರವಾರ ಸಂಜೆ ಮಿಗ್ 21ವಿಮಾನ ತಿಮ್ಮಯ್ಯ ಮ್ಯೂಸಿಯಂ ಸೇರುವಂತಾಗಿದೆ.
ಅಲಹಾಬಾದ್‌ನಿಂದ ಟ್ರಕ್‌ನಲ್ಲಿ ಬಂದಿರುವ ಮಿಗ್ 21 ವಿಮಾನ ಸದ್ಯ ಬಿಡಿ ಬಿಡಿಯಾಗಿದ್ದು, ಮುಂದಿನ ದಿನದಲ್ಲಿ ಏರ್‌ಪೋರ್ಸ್‌ ಗ್ರೌಂಡ್ ಇಂಜಿನಿಯರ್‌ಗಳು ಮಿಗ್ 21ನ್ನು ಜೋಡಿಸುವ ಕಾರ್ಯವನ್ನು ಮಾಡಲಿದ್ದಾರೆ. ಮಿಗ್ 21 ಏರೋಪ್ಲೇನ್ ರೂಪತಾಳಲು ಇನ್ನೂ ಕೆಲ ಸಮಯ ಬೇಕಾಗಬಹುದು ಎಂದು ತಿಳಿಸಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ಮೇಜರ್ ಬಿದ್ದಂಡ ನಂಜಪ್ಪ, ಮುಂದಿನ ದಿನದಲ್ಲಿ ಮ್ಯೂಸಿಯಂಗೆ ಟ್ಯಾಂಕ್ ಹಾಗೂ ಗನ್ ಕೂಡ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಮ್ಯೂಸಿಯಂನ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ವಿವಿಧ ಸೇನಾ ಶಸ್ತ್ರಾಸ್ತ್ರಗಳ ಡಿಪೋಗಳಿಂದ ಸಂಗ್ರಹಿಸಲಾದ 25 ಆಯುಧಗಳನ್ನು ಸಂಗ್ರಹಿಸಿಡಲಾಗಿದೆ. ಮಿಷಿನ್‌ಗನ್, ಸೆಲ್ ಲೋಡಿಂಗ್ ರೈಫಲ್, 7.62 ಮತ್ತು 303 ಬೋರ್ ರೈಫಲ್, ಲೈಟ್ ಮಿಷಿನ್ ಗನ್, ಮೀಡಿಯಂ ಸೆಮಿಮಿಷನ್ ಕಾರ್ಬೈನ್ ಗನ್, ಪಾಯಿಂಟ್ 38 ಎಂಎಂ ರೈಫಲ್, ಬಝೂಕಾ ರಾಕೆಟ್ ಲಾಂಚರ್‌ಗಳು ತಂದಿರಿಸಲಾಗಿದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.