ಕನಕಗಿರಿಯ ಹೂವಿನ ಅಂಗಡಿಯಲ್ಲಿ ಬಿಸಿಲಿಗೆ ಬಾಡಿರುವ ಹೂವಿನ ಹಾರಗಳು. 
ಜಿಲ್ಲೆ

ಬಿಸಿಲಿನ ಬೇಗೆಗೆ ಬಸವಳಿದ ಜನತೆ

Kopala - Desk - Eraveni

ಕನಕಗಿರಿ; ಕಳೆದೊಂದು ವಾರದಿಂದ ಹೆಚ್ಚಾಗಿರುವ ಬೇಸಿಗೆಯ ಬಿಸಿಲಿನ ಬೇಗೆಗೆ ತಾಲೂಕಿನ ಜನತೆ ಬಸವಳಿದಿದ್ದು, ಹೊರಗೆ ಬರುವುದಕ್ಕೂ ಹೆದರಿಕೊಂಡಿದ್ದಾರೆ.

ಕಳೆದ ವಾರ ವರ್ಷದ ಮೊದಲ ಮಳೆ ನಂತರ ತಾಪಮಾನ ಹೆಚ್ಚಾಗಿದೆ. ಇನ್ನು ಬೆಳಗ್ಗೆಯಿಂದಲೇ ಆರಂಭವಾಗುವ ಬಿಸಿಲು ಮಧ್ಯಾಹ್ನದ ವೇಳೆಯಲ್ಲಿ 39-40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. 40ಡಿಗ್ರಿ ಈ ವರ್ಷದ ಅತೀ ಹೆಚ್ಚಿನ ತಾಪಮಾನವಾಗಿದೆ.

ಸೂರ್ಯನುಗುಳುವ ಬಿಸಲಿಗೆ ಕಾಂಕ್ರಿಟ್ ಹಾಗೂ ತಗಡಿನ ಮನೆಗಳು ಬೆಳಗ್ಗೆ 11 ಗಂಟೆಯೊತ್ತಿಗೆ ಕಾದ ಕಬ್ಬಿಣದಂತಾಗುತ್ತವೆ. ಸಿಸಿ ರಸ್ತೆಗಳು ಕಾದ ಹಂಚಿನಂತಾಗಿ ಮನೆಯೊಳಗಿನವರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡ ಹಾಗೂ ಮಧ್ಯಮ ವರ್ಗದವರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಫ್ಯಾನ್ ಹಾಗೂ ಏರ್‌ಕೂಲರ್ ಬಳಸುತ್ತಿದ್ದಾರೆ. ಶ್ರೀಮಂತರು ಮನೆಗೆ ಎಸಿ ಅಳವಡಿಸಿಕೊಂಡು ತಣ್ಣಗಿರಲು ಪ್ರಯತ್ನಿಸುತ್ತಿದ್ದಾರೆ.

ಆದರೂ, ದಿನವಿಡಿ ಎಸಿ, ಫ್ಯಾನ್, ಏರ್ ಕೂಲರ್ ಆಶ್ರಯಿಸುವುದು ಕಷ್ಟವಾಗುವುದರಿಂದ ಗಿಡಗಳ ನೆರಳಿನ ಕಡೆಗೆ ಸ್ವಲ್ಪ ಹೊತ್ತು ವಿರಮಿಸುವುದು ಸಾಮಾನ್ಯವಾಗಿದೆ. ಪಟ್ಟಣದಲ್ಲಿ ಹೆಚ್ಚು ಗಿಡಗಳಿರುವ ಚಿದಾನಂದವಧೂತರ ಮಠ ಹಾಗೂ ನೆಲಮಟ್ಟದಲ್ಲಿ ಸದಾ ತಂಪಾಗಿರುವ ವೆಂಕಟಪತಿ ಬಾವಿಯಲ್ಲಿ ಜನರು ವಿಶ್ರಮಿಸುತ್ತಿದ್ದಾರೆ.

ಮಕ್ಕಳು ಮತ್ತು ವೃದ್ಧರು ತಾಪಮಾನಕ್ಕೆ ಉಸ್ಸಪ್ಪಾ ಎನ್ನುತ್ತಿದ್ದು, ಮಕ್ಕಳು ನೀರಿನಲ್ಲಿ ಆಟವಾಡುವ ಮೂಲಕ ಬೇಸಿಗೆಯ ಬಿಸಿಲನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಬಿಸಿಲಿಗೆ ತಡೆದುಕೊಳ್ಳದವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಬಾಡುತ್ತಿರುವ ಹೂವು: ಬಿಸಿಲಿನ ತಾಪಕ್ಕೆ ಹೂವು ಬಾಡಲಾರಂಭಿಸಿದ್ದು, ವ್ಯಾಪಾರಿಗಳು ಹೂ ತರಿಸುವುದಕ್ಕೆ ಹೆದರುತ್ತಿದ್ದಾರೆ. ಅಂಗಡಿಗಳ ಮುಂದೆ ಹಾಕಲಾಗಿದ್ದ ಹೂವಿನ ಹಾರಗಳು ಬಾಡುತ್ತಿರುವುದರಿಂದ ಗ್ರಾಹಕರು ಖರೀದಿ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಇದರಿಂದ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ವ್ಯಾಪಾರಿಗಳದ್ದಾಗಿದೆ. ತಂಪು ಪಾನೀಯಗಳ ಮೊರೆ: ಬಿಸಿಲಿನ ತಾಪಕ್ಕೆ ಜನತೆ ದಾಹ ತೀರಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಜ್ಯೂಸ್, ಐಸ್ ಸೇರಿ ನಾನಾ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಎಳೆ ನೀರು 60ರೂ. ಆದರೂ ದೇಹ ತಂಪಾಗಿಸಿಕೊಳ್ಳಲು ಕುಡಿಯುತ್ತಿದ್ದಾರೆ.

ಆಡಳಿತ ವೈದ್ಯಾಧಿಕಾರಿ ಕನಕಗಿರಿ

ಡಾ.ಸಹನಾ

ದಿನದಿಂದ ದಿನಕ್ಕೆ ತಾಪಮಾನ ಏರಿಕೆ ಕಾಣುತ್ತಿದ್ದು, ಬಿಸಿಲಿನಲ್ಲಿ ಓಡಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ನೀರು, ಜ್ಯೂಸ್ ಹೆಚ್ಚಾಗಿ ಕುಡಿಯಬೇಕು. ಬಿಸಿಲಿನಿಂದ ನಿರ್ಜಲೀಕರಣ ಆಗುವ ಸಾಧ್ಯತೆಯಿದ್ದರಿಂದ ಒಂದೆರಡು ಸಲ ವಾಂತಿ ಬೇಧಿಯಾದರೆ ಮೊದಲಿಗೆ ಒಆರ್‌ಎಸ್ ಕುಡಿಸಬೇಕು. ಆನಂತರ ಆಸ್ಪತ್ರೆಗೆ ಕರೆ ತರಬೇಕು. ಮೃದುವಾದ ಕಾಟನ್ ಬಟ್ಟೆ ಬಳಸಬೇಕು.