ಡಾ.ಕೆ.ಶಿವರಾಜ ಮಕ್ಕಳ ತಜ್ಞ, ಸಿಂಧನೂರು 
ಜಿಲ್ಲೆ

ಬಿಸಿಲಿನ ಝಳಕ್ಕೆ ಬಳಲುತ್ತಿವೆ ನವಜಾತು ಶಿಶುಗಳು

ರುದ್ರಪ್ಪ ವಾಲಿ

ಸಿಂಧನೂರು: ಬಿಸಿಲ ಝಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ನಗರದ ಹಲವು ಮಕ್ಕಳ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಒಂದೊಂದು ದಿನಕ್ಕೆ ಕೆಲ ಆಸ್ಪತ್ರೆಯಲ್ಲಿ 500 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಭಯ ತರಿಸುವಂತಾಗಿದೆ.

ಕಳೆದ ತಿಂಗಳಿಂದ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದೆ. ಇದರಿಂದ ಭೂಮಿ, ಮನೆಗಳಲ್ಲಿ ತಾಪ ಅಧಿಕವಾಗಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ವಾಂತಿ-ಭೇದಿ, ಜ್ವರ, ಮೈಮೇಲೆ ಗುಳ್ಳೆಗಳು ಏಳುವುದು, ಬೆವರುಸಾಲೆ, ನಿರ್ಜಲೀಕರಣ ಸೇರಿ ಇನ್ನಿತರ ಅನಾರೋಗ್ಯ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬರುತ್ತಿದ್ದು, ಸರ್ಕಾರಿ ಸೇರಿ ಖಾಸಗಿ ಆಸ್ಪತ್ರೆಗಳಿಗೆ ಪಾಲಕರು ಅಲೆದಾಡುತ್ತಿದ್ದಾರೆ.

ಕಳೆದ ನಾಲ್ಕೈದು ದಿನಗಳಲ್ಲಿ ಮಕ್ಕಳ ಖಾಸಗಿ ಆಸ್ಪತ್ರೆಯೊಂದರಲ್ಲಿ 350 ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಖಾಸಗಿ ಚರ್ಮರೋಗ ತಜ್ಞರ ಆಸ್ಪತ್ರೆಯಲ್ಲಿ 100 ಹೊರ ರೋಗಿಗಳು ಚಿಕಿತ್ಸೆಗೆ ತಗೆದುಕೊಂಡಿರುವುದು ಬಿಸಿಲಿನ ಭೀಕರತೆಗೆ ಸಾಕ್ಷಿಯಾಗಿದೆ.
ನಗರದ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ಮುಂದೆ ಬೆಳಗ್ಗೆ 6 ಗಂಟೆಗೂ ಮುನ್ನವೇ ಕೆಲವರು ಮಕ್ಕಳ ಚಿಕಿತ್ಸೆಗಾಗಿ ಚೀಟಿ ಮಾಡಿಸಲು ಸರದಿ ಸಾಲಲ್ಲಿ ನಿಲ್ಲುವಂತಾಗಿದೆ. ದಿನವೂ ಆಸ್ಪತ್ರೆಗೆ 300ಕ್ಕೂ ಹೆಚ್ಚು ಹೊರ ರೋಗಿಗಳು ಭೇಟಿ ನೀಡುತ್ತಿದ್ದು, ಒಳರೋಗಿಗಳ ಸಂಖ್ಯೆಯೂ ಗಣನೀಯವಾಗಿದೆ.

ಈ ಬಾರಿಯ ಬಿಸಿಲ ಬೇಗೆ ಮಕ್ಕಳ ಮೇಲೆ ಅಪಾಯ ತಂದೊಡ್ಡಿದೆ. ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿದೆ. ವಿಪರೀತ ಬಿಸಿಲು, ಬಿಸಿಗಾಳಿ, ಸೆಕೆ ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನವಜಾತ ಶಿಶುಗಳು, ವರ್ಷದ ಒಳಗಿನ ಮಕ್ಕಳನ್ನು ಪಾಲನೆ ಮಾಡುವುದು ಪಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಕುದಿಯಿಂದಾಗಿ ಮಕ್ಕಳು ಪದೇ ಪದೆ ಅಳುವುದು, ಚೀರುವುದು, ನಿದ್ರೆಯಿಲ್ಲದೇ ಪರಿತಪಿಸುತ್ತಿದ್ದಾರೆ. ಸಂತೈಸುವುದರೊಳಗೆ ತಾಯಂದಿರುವ ಹಾಗೂ ಪಾಲಕರಲು ಹೈರಾಣಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಬಿಸಿಲಿನಿಂದ ಎಲ್ಲ ವರ್ಗದ ಮಕ್ಕಳಲ್ಲಿ ನಿರ್ಜಲೀಕರಣ, ನವಜಾತ ಶಿಶುಗಳು ಕಾಮಲೆ, ಜ್ವರ, ಹುಟ್ಟಿದ ಮಗುವಿಗೆ ನೀರಿನ ಅಂಶ ಕಡಿಮೆಯಾಗಿ ಕಿಡ್ನಿ ವೈಫಲ್ಯ ಉಂಟಾಗುತ್ತಿದೆ. ಏಪ್ರಿಲ್‌ನಲ್ಲಿ ದಿನಕ್ಕೆ 500 ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಿಸಿದಷ್ಟು ಮಕ್ಕಳಿಗೆ ಅಪಾಯ ತಂದೊಡ್ಡಿದೆ. ತಾಯಂದಿರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ.ಡಾ.ಕೆ.ಶಿವರಾಜ
ಮಕ್ಕಳ ತಜ್ಞ, ಸಿಂಧನೂರು

 ಜ್ವರ, ವಾಂತಿ-ಭೇದಿ, ನಿರ್ಜಲೀಕರಣ ಸಮಸ್ಯೆ ಸೇರಿದಂತೆ ಇನ್ನಿತರ ಅನಾರೋಗ್ಯದಿಂದ ಚಿಕ್ಕಮಕ್ಕಳು ಸಮಸ್ಯೆಗೊಳಗಾಗುತ್ತಿದ್ದಾರೆ. ಮಗುವಿಗೆ ಮೇಲಿಂದ ಮೇಲೆ ಭೇದಿಯಾಗಿದೆ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದು, ಇಂದಿಗೆ ಮೂರು ದಿನ ಆಯ್ತು. ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ. ವೈದ್ಯರ ಸಲಹೆ ಪಡೆದು, ಅವರು ಡಿಸ್ಚಾರ್ಜ್ ಮಾಡಿದರೆ ಮನೆಗೆ ಹೋಗಬೇಕು.

ಶರಣಮ್ಮ

ಪಾಲಕರು, ಸಿಂಧನೂರು.