ವಿಜಯಪುರ ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ. ಪಾಟೀಲ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ವಿಪ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ಜಿ.ಕೆ. ಪಾಟೀಲ, ಪ್ರತಿಭಾಗೌಡತಿ ಪಾಟೀಲ, ಬಾಪುಗೌಡ ಪಾಟೀಲ ಮತ್ತಿತರರಿದ್ದಾರೆ. 
ಜಿಲ್ಲೆ

ಶಿಕ್ಷಣ ಕ್ಷೇತ್ರಕ್ಕೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ


ವಿಜಯಪುರ: ಶಿಕ್ಷಣ ಎಂಬ ದಿವ್ಯ ಬೆಳಕನ್ನು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಗಿಸಿದ ಶ್ರೇಯಸ್ಸು ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರಿಗೆ ಸಲ್ಲುತ್ತದೆ ಎಂದು ವಿಪ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ. ಪಾಟೀಲ ಸಮುದಾಯ ಭವನದಲ್ಲಿ ದಿ.ಶ್ರೀ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶ್ರೀ ಶಿರಸಂಗಿ ಲಿಂಗರಾಜ ಪತ್ತಿನ ಸಹಕಾರಿ ಸಂಘ ನಿಯಮಿತ ಹಾಗೂ ಜಿಲ್ಲಾ ಲಿಂಗಾಯತ ಕುಡುವಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣವೇ ಶಕ್ತಿ ಎಂದು ತಿಳಿದಿದ್ದರು. ಹೀಗಾಗಿ ತಮ್ಮ ಅಪಾರ ಸಂಪತ್ತನ್ನು ಶಿಕ್ಷಣದ ಪವಿತ್ರ ಕಾರ್ಯಕ್ಕೆ ಬಳಕೆಯಾಗಬೇಕು ಎಂದು ಸಂಪತ್ತನ್ನು ದಾನ ಮಾಡಿದರು. ಪರಿಣಾಮವಾಗಿ ಅನೇಕ ಶಿಕ್ಷಣ ಸಂಸ್ಥೆಗಳು ಬೆಳೆದು ಜ್ಞಾನ ದಾಸೋಹ ನೀಡಲು ಸಾಧ್ಯವಾಯಿತು. ಅಂದು ಶಿರಸಂಗಿ ಲಿಂಗರಾಜ ಮಹಾರಾಜರ ದೂರದೃಷ್ಟಿ ಹಾಗೂ ತ್ಯಾಗಗುಣದ ಫಲವಾಗಿ ಲಕ್ಷಾಂತರ ಜನರಿಗೆ ಶಿಕ್ಷಣ ಎಂಬ ವರದಾನ ಪ್ರಾಪ್ತವಾಯಿತು. ಅವರ ತ್ಯಾಗ, ಶ್ರಮದ ಫಲವಾಗಿ ಕೆಎಲ್ಇ, ಬಿಎಲ್ಡಿಇ ಸಂಸ್ಥೆಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.

ವಿಪ ಮಾಜಿ ಸದಸ್ಯ ಜಿ.ಕೆ. ಪಾಟೀಲ ಮಾತನಾಡಿ, ತ್ಯಾಗವೀರ ಶಿರಸಂಗಿ ಲಿಂಗರಾಜ ಮಹಾರಾಜರು ಶಿಕ್ಷಣಕ್ಕಾಗಿ ತಮ್ಮ ಸಂಪತ್ತು ದಾನ ಮಾಡಿದ ಮಹಾನ್ ಶಿಕ್ಷಣ ಪ್ರೇಮಿ. ಅವರ ತ್ಯಾಗ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ನಾವು ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಸಮಾಜ ಸಂಘಟನೆಯಾಗಿ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದು, ಇದಕ್ಕೆ ಅನೇಕ ಸಮಾಜ ಬಾಂಧವರು ಕೈ ಜೋಡಿಸಿರುವುದು ಸಂತೋಷ ಹಾಗೂ ಹೆಮ್ಮೆ ತರಿಸಿದೆ ಎಂದರು.

ಜಿಪಂ ಮಾಜಿ ಸದಸ್ಯೆ ಪ್ರತಿಭಾಗೌಡತಿ ಪಾಟೀಲ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ. ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವುದರಿಂದ ಇತರರಿಗೂ ಸ್ಫೂರ್ತಿ ದೊರಕುತ್ತದೆ. ಪ್ರತಿಭಾ ಪುರಸ್ಕಾರ ಒಂದು ಮಹತ್ವಪೂರ್ಣ ಕಾರ್ಯ ಎಂದರು.

ಇಂಡಿಯ ಸಿದ್ಧರಾಮೇಶ್ವರ ಮಠದ ಪರಮಪೂಜ್ಯ ಸದ್ಗುರು ಡಾ.ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ಅಧ್ಯಕ್ಷ ಬಾಪುಗೌಡ ಪಾಟೀಲ, ಶಿರಸಂಗಿ ಲಿಂಗರಾಜ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ, ಎಸ್.ಎ. ಬಿರಾದಾರ (ಕನ್ನಾಳ), ಆರ್.ಎಸ್. ಜನಗೊಂಡ ಮತ್ತಿತರರಿದ್ದರು.